ದುಬೈ: ತಾಂತ್ರಿಕ ದೋಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ರ‍್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ಟೆಸ್ಟ್, ಏಕದಿನ ಮತ್ತು ಟಿ-20 ಸೇರಿ ಮೂರು ಮಾದರಿಯಲ್ಲೂ ನಂಬರ್ ಒನ್ ಪಟ್ಟಕ್ಕೇರಿತ್ತು. ಟಿ-20ರಲ್ಲಿ 267 ಅಂಕ, ಏಕದಿನದಲ್ಲಿ 114 ಅಂಕ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ 115 ಅಂಕಗಳೊಂದಿಗೆ ಭಾರತ ಅಗ್ರಸ್ಥಾನದಲ್ಲಿತ್ತು. ಆದ್ರೆ 126 ಅಂಕಗಳನ್ನು ಪಡೆದಿದ್ದ ಆಸ್ಟ್ರೇಲಿಯಾ ತಂಡ ಮಾತ್ರ ಎರಡನೇ ಸ್ಥಾನದಲ್ಲಿತ್ತು.
ಮೊದಲ ಟೆಸ್ಟ್‌ನಲ್ಲಿ ಸೋತಿದ್ದ ಆಸೀಸ್ 15 ಅಂಕ ಕಳೆದುಕೊಂಡು ಐಸಿಸಿ ವೆಬ್‌ಸೈಟ್‌ನಲ್ಲಿ ಮಧ್ಯಾಹ್ನ 2:30ಕ್ಕೆ ಎರಡನೇ ರ್ಯಾಂಕ್‌ಗೆ ಕುಸಿದಿತ್ತು. ಆದರೆ ಮತ್ತೆ ತಪ್ಪಿನ ಅರಿವಾಗಿ ಸಂಜೆ 7 ಗಂಟೆಗೆ ಐಸಿಸಿ ಇದನ್ನು ಸರಿಪಡಿಸಿಕೊಂಡಿದೆ. ಇದರಿಂದಾಗಿ ಮೊದಲೆರಡು ಸ್ಥಾನಗಳಲ್ಲಿ ಆಸೀಸ್ ಹಾಗೂ ಭಾರತ ಮುಂದುವರಿದಿದೆ.
ಏಕದಿನ ಹಾಗೂ ಟಿ20ಯಲ್ಲಿ ಟೀಂ ಇಂಡಿಯಾ ನಂಬರ್ ಒನ್ ಆಗಿರುವುದು ಈಗಾಗಲೇ ತಿಳಿದೇ ಇದೆ. ರೋಹಿತ್ ಸೇನೆ ಎರಡನೇ ಟೆಸ್ಟ್‌ನಲ್ಲಿ ಗೆದ್ದರೆ ಟೆಸ್ಟ್‌ನಲ್ಲೂ ಅಗ್ರಸ್ಥಾನ ಭದ್ರಪಡಿಸಿಕೊಳ್ಳಲಿದೆ. ಮತ್ತೊಂದೆಡೆ, ಟೆಸ್ಟ್ ಬೌಲರ್‌ಗಳ ಶ್ರೇಯಾಂಕದಲ್ಲಿ ಸ್ಪಿನ್ನರ್ ಅಶ್ವಿನ್ ಎರಡನೇ ರ‍್ಯಾಂಕಿಂಗ್ ಪಡೆದಿದ್ದಾರೆ. ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಬಲಿಷ್ಠ ಪುನರಾಗಮನ ಮಾಡಿಕೊಂಡಿರುವ ಜಡೇಜಾ ಬೌಲರ್‌ಗಳ ರ‍್ಯಾಂಕಿಂಗ್‌ನಲ್ಲಿ 16ನೇ ಸ್ಥಾನಕ್ಕೆ ತಲುಪಿದ್ದಾರೆ. ಆಸೀಸ್ ನಾಯಕ ಕಮ್ಮಿನ್ಸ್ ಅಗ್ರಸ್ಥಾನದಲ್ಲಿದ್ದಾರೆ.
ಓದಿ: ಆಸ್ಟ್ರೇಲಿಯಾ ವನಿತೆಯರಿಗೆ ವಿಶ್ವಕಪ್ ಗೆಲ್ಲಿಸಿದ ಖ್ಯಾತಿಯ ಬೆನ್ ಸ್ವಾಯರ್ ಈಗ ಆರ್ಸಿಬಿ ಮುಖ್ಯ ಕೋಚ್
ಮೊದಲ ಟೆಸ್ಟ್‌ನಲ್ಲಿ ಶತಕ ಸಿಡಿಸಿದ ರೋಹಿತ್ ಶರ್ಮಾ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡು ಸ್ಥಾನ ಸುಧಾರಿಸಿ ಎಂಟನೇ ರ‍್ಯಾಂಕ್ ತಲುಪಿದ್ದಾರೆ. ರಸ್ತೆ ಅಪಘಾತದಲ್ಲಿ ಗಾಯಗೊಂಡು ಆಟದಿಂದ ವಂಚಿತರಾಗಿರುವ ಪಂತ್ ಏಳನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆಲ್ ರೌಂಡರ್ ಶ್ರೇಯಾಂಕದಲ್ಲಿ ಅಕ್ಷರ್ ಆರು ಸ್ಥಾನ ಮೇಲೇರಿ ಏಳನೇ ಸ್ಥಾನಕ್ಕೆ ತಲುಪಿದ್ದಾರೆ.
ಏಕದಿನ ರ‍್ಯಾಂಕಿಂಗ್: ಟೀಂ ಇಂಡಿಯಾ ಇತ್ತೀಚೆಗೆ ನ್ಯೂಜಿಲ್ಯಾಂಡ್ ವಿರುದ್ಧ 3-0 ಅಂತರದಿಂದ ಗೆಲುವು ದಾಖಲಿಸಿದ ಏಕದಿನ ಕ್ರಿಕೆಟ್ನಲ್ಲಿ ಅಗ್ರ ಶ್ರೇಯಾಂಕವನ್ನು ಪಡೆದಿದೆ. ಏಕದಿನದಲ್ಲಿ 114 ರೇಟಿಂಗ್ ಅಂಕಗಳನ್ನು ಭಾರತ ತಂಡ ಹೊಂದಿದೆ. ಆಸ್ಟ್ರೇಲಿಯಾ 112 ಅಂಕಗಳೊಂದಿಗೆ ಎರಡನೇ ಸ್ಥಾನ, ನ್ಯೂಜಿಲ್ಯಾಂಡ್ ಹಾಗೂ ಇಂಗ್ಲೆಂಡ್ ತಂಡವು ತಲಾ 111 ರೇಟಿಂಗ್ ಅಂಕಗಳೊಂದಿಗೆ ಕ್ರಮವಾಗಿ ಮೂರನೇ ಹಾಗೂ ನಾಲ್ಕನೇ ಸ್ಥಾನ ಪಡೆದಿದೆ. 106 ಅಂಕಗಳೊಂದಿಗೆ ಪಾಕಿಸ್ತಾನ ಐದನೇ ಸ್ಥಾನ ಹೊಂದಿದೆ.
ಟಿ-20 ರ‍್ಯಾಂಕಿಂಗ್: ಟಿ-20 ಕ್ರಿಕೆಟ್ ರ‍್ಯಾಂಕಿಂಗ್‌ನಲ್ಲಿ 267 ರೇಟಿಂಗ್ ಅಂಕಗಳೊಂದಿಗೆ ಟೀಂ ಇಂಡಿಯಾ ಅಗ್ರಸ್ಥಾನದಲ್ಲಿದೆ. ಭಾರತಕ್ಕಿಂತ ಕೇವಲ ಒಂದು ಅಂಕ ಕಡಿಮೆ ಹೊಂದಿರುವ ಇಂಗ್ಲೆಂಡ್ (266) ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ (258) ಮತ್ತು ದಕ್ಷಿಣ ಆಫ್ರಿಕಾ (256) ಹಾಗೂ ನ್ಯೂಜಿಲೆಂಡ್ ತಂಡಗಳು (252) ಕ್ರಮವಾಗಿ ಮೂರನೇ, ನಾಲ್ಕನೇ ಹಾಗೂ ಐದನೇ ಸ್ಥಾನವನ್ನು ಹೊಂದಿವೆ.
ಓದಿ: ಟೆಸ್ಟ್, ಏಕದಿನ, ಟಿ-20.. ಮೂರು ಮಾದರಿಯಲ್ಲೂ ಟೀಂ ಇಂಡಿಯಾಗೆ ನಂಬರ್ ಒನ್ ಪಟ್ಟ