ಮುಂಬೈ: ಧೋನಿ ಜೊತೆ ಭಿನ್ನಾಭಿಪ್ರಾಯವಿದೆ ಎನ್ನುವ ಗೊಂದಲಕ್ಕೆ ತೆರೆ ಎಳೆದಿರುವ ಮಾಜಿ ಕ್ರಿಕೆಟಿಗರ ಗಂಭೀರ್, ಮಾಜಿ ನಾಯಕನ ಮೇಲೆ ತಮಗೆ ಅಪಾರ ಗೌರವ ಇದ್ದು, ಅಗತ್ಯಬಿದ್ದಾಗ ಅವರ ಪಕ್ಕ ನಿಲ್ಲುವ ಮೊದಲ ವ್ಯಕ್ತಿ ನಾನು ಎಂದು ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ವಿಶ್ವಕಪ್ ಫೈನಲ್ ಸೇರಿದಂತೆ ಹಲವಾರ ವಿಚಾರಗಳಲ್ಲಿ ಧೋನಿ ಬಗ್ಗೆ ಗಂಭೀರ ನೇರ ಹೇಳಿಕೆ ಕೊಟ್ಟು ಅಭಿಮಾನಿಗಳ ಕೆಂಗಣ್ಣಿಗೆ ಕಾರಣರಾಗುತ್ತಿದ್ದರು. ಈ ಹೇಳಿಕೆಗಳು ಪರೋಕ್ಷವಾಗಿ ಧೋನಿ ಮೇಲೆ ಗಂಭೀರ್ಗೆ ಅಸಮಾಧಾನವಿದೆ ಎಂಬುದನ್ನು ಎತ್ತಿ ತೋರಿಸುತ್ತಿತ್ತು. 2011ರ ವಿಶ್ವಕಪ್ನಲ್ಲಿ ಸ್ವತಃ ಗಂಭೀರ್ 97 ರನ್ಗಳಿಸಿದ್ದರು. ಆದರೆ, ಮಾಧ್ಯಮಗಳಲ್ಲಿ ಧೋನಿ ಸಿಡಿಸಿದ ಮ್ಯಾಚ್ ವಿನ್ನಿಂಗ್ ಸಿಕ್ಸ್ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿತ್ತು. ಈ ವಿಚಾರವಾಗಿ ಗಂಭೀರ್ ಸದಾ ತಮ್ಮ ಅಸಮಾಧಾನ ಹೊರಹಾಕುತ್ತಿದ್ದರು. ಒಂದು ಸಿಕ್ಸರ್ನಿಂದ ವಿಶ್ವಕಪ್ ಗೆದ್ದಿಲ್ಲ ಎಂದು ಹಲವು ಬಾರಿ ನೇರವಾಗಿ ಹೇಳಿಕೆ ನೀಡಿದ್ದರು.
ಆದರೆ ಜತಿನ್ ಸಪ್ರೂ ಅವರ ಓವರ್ ಅಂಡ್ ಔಟ್ ಯೂಟ್ಯೂಬ್ ಚಾನೆಲ್ನ ಸಂವಾದದ ವೇಳೆ ಧೋನಿ ಮತ್ತು ನನ್ನ ನಡುವೆ ಮನಸ್ತಾಪವಿದೆ ಎನ್ನುವುದೆಲ್ಲ ಅಸಂಬದ್ಧ ವರದಿಗಳು ಎಂದು ತಿಳಿಸಿದ್ದಾರೆ. ಎಂಎಸ್ ಧೋನಿ ಎಂದರೆ ಅಪಾರ ಗೌರವ ಇದೆ. ಅದು ಯವಾಗಲೂ ಇದ್ದೇ ಇರುತ್ತದೆ. ನಾನು ಈಗಾಗಲೇ ಹಲವು ಬಾರಿ ನೇರ ಪ್ರಸಾರದಲ್ಲಿ ಹೇಳಿದ್ದೇನೆ, ನಿಮ್ಮ ಚಾನೆಲ್ ಮೂಲಕ ಹೇಳುತ್ತಿದ್ದೇನೆ, ಅಗತ್ಯಬಿದ್ದರೆ 138 ಕೋಟಿ ಜನರು ಮುಂದೆ ಎಲ್ಲಿ ಬೇಕಾದರೂ ಹೇಳುತ್ತೇನೆ.
ಅವರಿಗೆ ಜೀವನದಲ್ಲಿ ಯಾವುದಾದರೂ ಅವಶ್ಯಕತೆ ಬಂದರೆ ಅವರ ಪಕ್ಕ ನಿಲ್ಲುವ ಮೊದಲು ನಾನಾಗಿರುತ್ತೇನೆ. ಅವರಿಗೆ ಅಂತಹ ಸ್ಥಿತಿ ಬರುವುದಿಲ್ಲ ಎಂದು ಭಾವಿಸುತ್ತೇನೆ, ಒಂದು ವೇಳೆ, ಬಂದರೆ ಅವರೊಟ್ಟಿಗೆ ನಾನಿರುತ್ತೇನೆ. ಏಕೆಂದರೆ ಅವರು ಭಾರತ ಕ್ರಿಕೆಟ್ಗೆ ಅಂತಹ ಕೊಡುಗೆ ನೀಡಿದ್ದಾರೆ" ಎಂದು ಮನಸ್ಪೂರ್ತಿಯಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಮ್ಮಿಬ್ಬರ ಅಭಿಪ್ರಾಯಗಳು ವಿಭಿನ್ನವಾಗಿರಬಹುದು. ನಾನು ನನ್ನ ಸ್ವಂತ ಅಭಿಪ್ರಾಯಗಳನ್ನು ಹೊಂದಿದ್ದೇನೆ, ಅವರು ತನ್ನದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ. ಅವರು ನಾಯಕನಾಗಿದ್ದಾಗ ನಾನು ಹೆಚ್ಚು ಸಮಯ ಉಪನಾಯಕನಾಗಿದ್ದೆ. ನಾವು ನಮ್ಮದೇ ಆದ ತಂಡಗಳಿಗೆ ಆಡುವಾಗ ಮೈದಾನದಲ್ಲಿ ಪ್ರತಿಸ್ಪರ್ಧಿಗಳಾಗಿದ್ದೇವೆ. ಆದರೆ, ನಾನು ಅವರ ಬಗ್ಗೆ ತುಂಬಾ ಗೌರವವನ್ನು ಹೊಂದಿದ್ದೇನೆ, ಅವರು ಅಂತಹ ವ್ಯಕ್ತಿ ಮತ್ತು ಅಂತಹ ಕ್ರಿಕೆಟಿಗ ಎಂದು ಧೋನಿಯನ್ನು ಪ್ರಶಂಸಿದ್ದಾರೆ.
ಇದನ್ನೂ ಓದಿ:ಪಾಕ್ನಲ್ಲಿ ರಾಜಕೀಯ ಕೋಲಾಹಲ: ಪಾಕ್-ಆಸೀಸ್ ಏಕದಿನ, ಟಿ20 ಸರಣಿ ಲಾಹೋರ್ಗೆ ಶಿಫ್ಟ್