ಜೋಹಾನ್ಸ್ಬರ್ಗ್: ವಿರಾಟ್ ಕೊಹ್ಲಿ ವಿವಾದಗಳಿಂದ ದೂರ ಉಳಿಯಲು ಮಾಧ್ಯಮಗೋಷ್ಟಿಯನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಹೇಳಿಕೆಯನ್ನು ತಳ್ಳಿ ಹಾಕಿರುವ ಭಾರತ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಮುಂಬರುವ ಟೆಸ್ಟ್ ಪಂದ್ಯ ಕೊಹ್ಲಿಯ 100ನೇ ಟೆಸ್ಟ್ ಪಂದ್ಯವಾಗಲಿದ್ದು, ಅಂದು ಅವರು ಮಾಧ್ಯಮದವರೊಂದಿಗೆ ಮಾತನಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ವಿಶ್ವದಾದ್ಯಂತ ಯಾವುದೇ ಪಂದ್ಯಕ್ಕೂ ಮುನ್ನ ನಾಯಕ ಮಾಧ್ಯಮಗೋಷ್ಟಿಗೆ ಹಾಜರಾಗುತ್ತಾರೆ. ಆದರೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಾಧ್ಯಮದವರೊಂದಿಗೆ ಮಾತನಾಡಿರಲಿಲ್ಲ. ಆದರೆ ನಂತರ ಜನವರಿ 3(ಸೋಮವಾರ)ರಿಂದ ನಡೆಯಲಿರುವ ಜೋಹಾನ್ಸ್ಬರ್ಗ್ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂದು ಕೊಹ್ಲಿ ಬದಲಿಗೆ ಕೋಚ್ ರಾಹುಲ್ ದ್ರಾವಿಡ್ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕೊಹ್ಲಿ ಅವರು ಈ ಹಿಂದೆ ಏಕದಿನ ನಾಯಕತ್ವದಿಂದ ಕೆಳಗಿಳಿಸಿದ ಕುರಿತು ನೀಡಿರುವ ಹೇಳಿಕೆಗಳಿಂದ ಗೊಂದಲ ಉಂಟಾಗಿರುವುದರಿಂದ ತಾವಾಗಿಯೇ ಮಾಧ್ಯಮಗೋಷ್ಟಿ ತಪ್ಪಿಸಿಕೊಳ್ಳುತ್ತಿದ್ದಾರೆಯೇ ಎಂದು ಕೇಳಿದ್ದಕ್ಕೆ ದ್ರಾವಿಡ್ ಅದೆಲ್ಲಾ ಕೇವಲ ಊಹಾಪೋಹ, ಕೊನೆಯ ಪಂದದಲ್ಲಿ ಅವರು ಹಾಜರಾಗುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಆ ರೀತಿ ಏನೂ ಇಲ್ಲ, ನಾನೇ ಅವರನ್ನು ಈ ಮಾಧ್ಯಮಗೋಷ್ಟಿಯಿಂದ ಹಿಂದೆ ಬರಲು ಹೇಳಿದೆ. ಕೇಪ್ ಟೌನ್ನಲ್ಲಿ ನಡೆಯುವ 3ನೇ ಟೆಸ್ಟ್ ಅವರ ವೃತ್ತಿ ಜೀವನದ 100ನೇ ಟೆಸ್ಟ್ ಪಂದ್ಯವಾಗಲಿದ್ದು, ಆ ಸಂದರ್ಭದಲ್ಲಿ ಅವರು ಮಾಧ್ಯಮದ ಜೊತೆ ಮಾತನಾಡಿದರೆ, ಅದೊಂದು ದೊಡ್ಡ ಈವೆಂಟ್ ಆಗುತ್ತದೆ. ವರದಿಗಾರರು ಕೂಡ ಅವರ 100ನೇ ಟೆಸ್ಟ್ ಪಂದ್ಯದ ಬಗ್ಗೆ ಪ್ರಶ್ನೆ ಕೇಳಬಹುದು, ನೀವು ಅವರ ಸಾಧನೆಯನ್ನು ಆಚರಿಸಬಹುದು. ನನಗೆ ಗೊತ್ತಿರುವ ಹಾಗೆ ಇದನ್ನು ಬಿಟ್ಟರೆ ಬೇರೆ ಯಾವುದೇ ಕಾರಣವಿಲ್ಲ ಎಂದು ದ್ರಾವಿಡ್ ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ ಮಾತನಾಡದೇ ಇದ್ದಂತಿಲ್ಲ, ಅವರೂ ಟಾಸ್ ಸಂದರ್ಭದಲ್ಲಿ, ಪಂದ್ಯದ ಸಮಯದಲ್ಲಿ ಹಲವಾರು ಸಂದರ್ಶನಗಳಲ್ಲಿ ಮಾತನಾಡಿದ್ದಾರೆ. 100ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಮಾಧ್ಯಮಗೋಷ್ಟಿಯಲ್ಲೂ ಮಾತನಾಡಲಿದ್ದಾರೆ ಎಂದು ಟೀಂ ಇಂಡಿಯಾ ಕೋಚ್ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಇದನ್ನೂ ಓದಿ:IND vs SA 2ನೇ ಟೆಸ್ಟ್: ಹರಿಣಗಳ ವಿರುದ್ಧ ಐತಿಹಾಸಿಕ ಸರಣಿ ಗೆಲ್ಲುವತ್ತ ಟೀಮ್ ಇಂಡಿಯಾ ಚಿತ್ತ