ನವದೆಹಲಿ: ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಸ್ಪಿನ್ನರ್ ವಿಕಿ ಒಸ್ತ್ವಾಲ್, ಭಾರತ ಸೀನಿಯರ್ ತಂಡದ ಆಲ್ರೌಂಡರ್ ರವೀಂದ್ರ ಜಡೇಜಾ ತಾವೂ ಆರಾಧಿಸುವ ಕ್ರಿಕೆಟಿಗ ಮತ್ತು ಅವರೇ ತಮಗೆ ಆದರ್ಶ ಎಂದು ಹೇಳಿಕೊಂಡಿದ್ದಾರೆ.
ಅಂಡರ್ ವಿಶ್ವಕಪ್ ನಂತರ ನಡೆದ ಇಂಡಿಯನ್ ಪ್ರೀಮಿಯರ್ ಮೆಗಾ ಹರಾಜಿನಲ್ಲಿ 20 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸೇರಿರುವ ಯುವ ಆಟಗಾರ, ಪ್ರಸ್ತುತ ರಣಜಿ ಟ್ರೋಪಿಯಲ್ಲಿ ಮಹಾರಾಷ್ಟ್ರ ತಂಡದಲ್ಲಿ ಅವಕಾಶ ಪಡೆದಿದ್ದಾರೆ.
ನಾನು ಯಾವಾಗಲೂ ರವೀಂದ್ರ ಜಡೇಜಾ ಅವರನ್ನು ಆರಾಧಿಸುತ್ತೇನೆ, ಅವರು ನನಗೆ ರೋಲ್ ಮಾಡೆಲ್. ಅವರು ಎಂತಹ ಅದ್ಭುತ ಆಟಗಾರ, ಬ್ಯಾಟಿಂಗ್, ಬೌಲಿಂಗ್ನಲ್ಲಿ ತಂಡಕ್ಕೆ ನೆರವಾಗುತ್ತಾರೆ. ವಿಶೇಷವಾಗಿ ಫೀಲ್ಡಿಂಗ್ನಲ್ಲಿ ಅವರ ಕೊಡುಗೆ ಅದ್ಭುತವಾಗಿದೆ. ಪ್ರತಿ ತಂಡದಲ್ಲೂ ಅಂತಹ ಒಬ್ಬ ಆಟಗಾರ ಇರಬೇಕು ಎಂದು ಯುವ ಸ್ಪಿನ್ನರ್ ಐಪಿಎಲ್ ವೆಬ್ಸೈಟ್ಗೆ ಹೇಳಿದ್ದಾರೆ.
ಇನ್ನು ತಮ್ಮ ಐಪಿಎಲ್ ಒಪ್ಪಂದ ಪಡೆದ ಸಂಭ್ರಮದ ಬಗ್ಗೆ ಮಾತನಾಡುತ್ತಾ, ನಾನು ಚಿಕ್ಕಂದಿನಿಂದಲೂ ಐಪಿಎಲ್ ಅನ್ನು ನೋಡುತ್ತಾ ಬೆಳೆದಿದ್ದೇನೆ. ಐಪಿಎಲ್ನಲ್ಲಿ ಆಡುವುದು ನನ್ನ ಕನಸಾಗಿತ್ತು. ನೀವು ಪಡೆಯಬಹುದಾದಂತಹ ಅತ್ಯಂತ ದೊಡ್ಡ ವೇದಿಕೆ. ಡೆಲ್ಲಿ ಕ್ಯಾಪಿಟಲ್ಸ್ ನನ್ನನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಂತೆ ನಾನು ಆ ವೇದಿಕೆಯನ್ನು ಪಡೆದುಕೊಂಡಿದ್ದೇನೆ ಎಂದು ವಿಕಿ ಹೇಳಿದ್ದಾರೆ.
ನನಗೆ ಡೆಲ್ಲಿ ತಂಡದಲ್ಲಿ ಆಡಲು ಅವಕಾಶ ಸಿಗುವುದರ ಬಗ್ಗೆ ಖಾತ್ರಿಯಿಲ್ಲ. ಆದರೆ, ಕಲಿಯುವುದಕ್ಕೆ ಅಲ್ಲಿ ಅಗಾಧವಾದ ಅವಕಾಶಗಳಿವೆ. ಕೆಲವು ಶ್ರೇಷ್ಠ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಒಂದು ದೊಡ್ಡ ಕಲಿಕೆಯಾಗಲಿದೆ. ಹರಾಜಿನಲ್ಲಿ ನನ್ನನ್ನು ಡೆಲ್ಲಿ ತಂಡ ಖರೀದಿಸುತ್ತಿದ್ದಂತೆ ಯಶ್ ಧುಲ್ ನನಗೆ ಕರೆ ಮಾಡಿದ್ದರು. ಡೆಲ್ಲಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಅವರ ಮುಖದಲ್ಲಿ ಸಾಕಷ್ಟು ಸಂಭ್ರಮವಿತ್ತು ಎಂದು ಒಸ್ತ್ವಾಲ್ ತಿಳಿಸಿದ್ದಾರೆ. ಯಶ್ ಧುಲ್ ಅವರನ್ನು ಕೂಡ ಡೆಲ್ಲಿ ಕ್ಯಾಪಿಟಲ್ಸ್ 50 ಲಕ್ಷ ರೂ ನೀಡಿ ಖರೀದಿಸಿದೆ.
ಇದನ್ನೂ ಓದಿ:ರಣಜಿ ಟ್ರೋಫಿ: ಪದಾರ್ಪಣೆ ಪಂದ್ಯದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ರಾಜ್ ಬಾವಾ