ರ್‍ಯಾಂಗಿಯೋರ(ನ್ಯೂಜಿಲ್ಯಾಂಡ್): ಉಪನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಜವಾಬ್ದಾರಿಯುತ ಶತಕ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದಿಂದ ಭಾರತ ಮಹಿಳಾ ತಂಡ ಏಕದಿನ ವಿಶ್ವಕಪ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ 2 ರನ್ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದಿದ್ದ ಭಾರತ ನಿರೀಕ್ಷಿತ ಆರಂಭ ಪಡೆಯುವ ಮೊದಲೇ ಓಪನರ್ ಸ್ಮೃತಿ ಮಂಧಾನ ಅವರಿಗೆ ಚೆಂಡು ತಲೆಗೆ ಬಡಿದ ಪರಿಣಾಮ ಮೈದಾನ ತೊರೆದರು. 3ನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬಂದ ದೀಪ್ತಿ ಶರ್ಮಾ 5 ರನ್ ಮತ್ತು ನಾಯಕ ಮಿಥಾಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.
ಆದರೆ 3ನೇ ವಿಕೆಟ್ಗೆ ಒಂದಾದ ಯಸ್ತಿಕಾ ಭಾಟಿಯಾ ಮತ್ತು ಕೌರ್ 84 ರನ್ಗಳ ಜೊತೆಯಾಟ ನಡೆಸಿ ಚೇತರಿಕೆ ನೀಡಿದರು. ಬಾಟಿಯಾ 78 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್ ಸಹಿತ 58 ರನ್ಗಳಿಸಿದರು. ಭಾಟಿಯಾ ವಿಕೆಟ್ ನಂತರ ಭಾರತೀಯ ಪಡೆ ಪೆವಿಲಿಯನ್ ಪರೇಡ್ ನಡೆಸಿತು.ರಿಚಾ ಘೋಷ್ 11, ಸ್ನೇಹ್ ರಾಣಾ 14, ಪೂಜಾ ವಸ್ತ್ರಾಕರ್ 16 ರನ್ಗಳಿಸಿ ವಿಕೆಟ್ ಒಪ್ಪಿಸಿದರು.
10ನೇ ಓವರ್ನಲ್ಲಿ ಕಣಕ್ಕಿಳಿದಿದ್ದ ಕೌರ್ 44ನೇ ಓವರ್ವರೆಗೂ ಬ್ಯಾಟಿಂಗ್ ಮಾಡಿ ಶತಕ ಪೂರೈಸಿದರು, ಅವರು 114 ಎಸೆತಗಳಲ್ಲಿ 8 ಬೌಂಡರಿ ಸಹಿತ 103 ರನ್ಗಳಿಸಿದರು.
ಇನ್ನು 245 ರನ್ಗಳ ಗುರಿ ಪಡೆದ ದಕ್ಷಿಣ ಆಫ್ರಿಕಾ ಮಹಿಳಾ ತಂಡ 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 242 ರನ್ಗಳಿಸಲಷ್ಟೇ ಶಕ್ತವಾಗಿ 2 ರನ್ಗಳ ರೋಚಕ ಸೋಲು ಕಂಡಿತು.
ಹರಿಣಗಳ ಪರ ಲೌರಾ ವೋಲ್ವಾರ್ಟ್ 95 ಎಸೆತಗಳಲ್ಲಿ 7 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 83, ನಾಯಕಿ ಸುನೆ ಲುಸ್ 98 ಎಸೆತಗಳಲ್ಲಿ 6 ಬೌಂಡರಿ ಸಹಿತ 86 ಹಾಗೂ ಮರಿಝಾನ್ನೆ ಕಾಪ್ 31 ರನ್ಗಳಿಸಿದರು.
ಭಾರತದ ಪರ ಕರ್ನಾಟಕದ ರಾಜೇಶ್ವರಿ ಗಾಯಕ್ವಾಡ್ 46ಕ್ಕೆ 4, ಮೇಗನಾ ಸಿಂಗ್ 38ಕ್ಕೆ1, ಸ್ನೇಹ್ ರಾಣಾ 38ಕ್ಕೆ1, ಪೂನಮ್ ಯಾದವ್ 54ಕ್ಕೆ1 ವಿಕೆಟ್ ಪಡೆದರು.
ಇದನ್ನೂ ಓದಿ:ಸ್ಟ್ರಾಂಡ್ಜಾ ಮೆಮೊರಿಯಲ್ ಬಾಕ್ಸಿಂಗ್: ಚಿನ್ನದ ಪದಕಕ್ಕೆ ಮುತ್ತಿಕ್ಕಿದ ಭಾರತದ ನಿಖಾತ್, ನೀತು