ನವದೆಹಲಿ: ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಉಳಿಸಿಕೊಳ್ಳದೇ ಮೆಗಾ ಹರಾಜಿಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಐಪಿಎಲ್ ಮೂಲಗಳಿಂದ ತಿಳಿದುಬಂದಿದೆ.
2022ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ 10 ತಂಡಗಳ ಸ್ಪರ್ಧೆಯಾಗಿರಲಿದೆ. ಈಗಾಗಲೇ ಆರ್ಪಿಎಸ್ಜಿ ಸಮೂಹ ಸಂಸ್ಥೆ ಲಖನೌವನ್ನು ಮತ್ತು ಸಿವಿಸಿ ಕ್ಯಾಪಿಟಲ್ ಅಹ್ಮದಾಬಾದ್ ಫ್ರಾಂಚೈಸಿ ಖರೀದಿಸಿದೆ. ಈ ವರ್ಷದ ಡಿಸೆಂಬರ್ನಲ್ಲಿ ಮೆಗಾ ಹರಾಜು ನಡೆಯಲಿದ್ದು, ಸಾಕಷ್ಟು ತಂಡಗಳು ಭವಿಷ್ಯದ ತಂಡವನ್ನು ಕಟ್ಟಲು ಎದುರು ನೋಡುತ್ತಿವೆ.
ಇನ್ನು ಕಳೆದ 14 ವರ್ಷಗಳಿಂದ ತನ್ನ ಬಹುತೇಕ ತಂಡವನ್ನು ಉಳಿಸಿಕೊಂಡು ಬರುತ್ತಿರುವ ಮುಂಬೈ ಇಂಡಿಯನ್ಸ್ ಈ ಬಾರಿ ಆಲ್ರೌಂಡರ್ ಸ್ಥಾನದಿಂದ ಸ್ಪೆಷಲಿಸ್ಟ್ ಬ್ಯಾಟರ್ ಆಗಿರುವ ಹಾರ್ದಿಕ್ ಅವರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಕಡಿಮೆಯಿದೆ ಎನ್ನಲಾಗುತ್ತಿದೆ.
ಬಿಸಿಸಿಐ 3 ಆಟಗಾರರ ರೀಟೈನ್ ಮತ್ತು ಒಂದು ಆರ್ಟಿಎಂ ಫಾರ್ಮುಲಾದ ಆಲೋಚನೆಯಲ್ಲಿದೆ ಎಂದು ನಾನು ಭಾವಿಸುತ್ತೇನೆ. ಒಂದು ವೇಳೆ ಆರ್ಟಿಎಂ ಇಲ್ಲದಿದ್ದರೆ ನಾಲ್ಕು ಆಟಗಾರರನ್ನು ರೀಟೈನ್ ಮಾಡಿಕೊಳ್ಳುವ ಅವಕಾಶವಿದೆ. ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ತಂಡದ ಸ್ವಯಂ ಆಯ್ಕೆಯಾಗಲಿದ್ದಾರೆ.
ಕೀರನ್ ಪೊಲಾರ್ಡ್ 3ನೇ ಆಟಗಾರನಾಗಿ ಉಳಿಸಿಕೊಳ್ಳಬಹುದು. ಈ ಮೂವರು ಮುಂಬೈ ಇಂಡಿಯನ್ಸ್ನ ಪಿಲ್ಲರ್ಗಳಾಗಿದ್ದಾರೆ ಎಂದು ರೀಟೆನ್ಸನ್ ಮಾರ್ಕೆಟ್ ಬಗ್ಗೆ ಮಾಹಿತಿ ಹೊಂದಿರುವ ಐಪಿಎಲ್ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ಹೇಳಿದ್ದಾರೆ.
ಪ್ರಸ್ತುತ ಸಮಯದಲ್ಲಿ ಹಾರ್ದಿಕ್ ಪಾಂಡ್ಯರನ್ನು ರೀಟೈನ್ ಮಾಡಿಕೊಳ್ಳುವ ಸಾಧ್ಯತೆ ಶೇ. 10 ಪರ್ಸೆಂಟ್ಗೂ ಕಡಿಮೆಯಿದೆ. ಟಿ20 ವಿಶ್ವಕಪ್ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಕೂಡ ಅವಕಾಶ ಕಡಿಮೆಯಿದೆ. ಏಕೆಂದರೆ ನಾಲ್ಕನೇ ಆಟಗಾರನಾಗಿ ಸೂರ್ಯಕುಮಾರ್ ಯಾದವ್ ಅಥವಾ ಇಶಾನ್ ಕಿಶನ್ ಅವರನ್ನು ಫ್ರಾಂಚೈಸಿ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ಐಪಿಎಲ್ ಅಧಿಕಾರಿ ತಿಳಿಸಿದ್ದಾರೆ.
ಕಳೆದ ಎರಡು ಆವೃತ್ತಿಯಿಂದಲೂ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡದೇ ಕೇವಲ ಬ್ಯಾಟರ್ ಆಗಿ ಮಾತ್ರ ಆಡುತ್ತಿದ್ದಾರೆ. ಅಲ್ಲದೇ ಅವರು ಭವಿಷ್ಯದಲ್ಲಿ 130ರ ವೇಗದಲ್ಲಿ ಬೌಲಿಂಗ್ ಮಾಡುವ ಸಾಧ್ಯತೆಯ ಬಗ್ಗೆ ಅನುಮಾನವಿದೆ. ಆದ್ದರಿಂದ ಕೇವಲ ಬ್ಯಾಟರ್ ಆಗಿ ಅವರನ್ನು ತಂಡದಲ್ಲಿ ಆಡಿಸುವುದು ಕಷ್ಟ. ಈಗಾಗಲೆ ಇದೇ ವಿಚಾರವಾಗಿ ಭಾರತ ತಂಡದಲ್ಲೂ ಚರ್ಚೆ ನಡೆಯುತ್ತಿದೆ.
ಒಂದು ವೇಳೆ ಹರಾಜಿಗೆ ಬಿಟ್ಟು ಮತ್ತೆ ಖರೀದಿಸಬಹುದು, ಆದರೆ ಅದು ಹಾರ್ದಿಕ್ ಪಡೆದುಕೊಳ್ಳುವ ಹಣದ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗಿದೆ. ಪ್ರಸ್ತುತ ರೋಹಿತ್, ಬುಮ್ರಾ, ಪೊಲಾರ್ಡ್, ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ಲಿಸ್ಟ್ನಲ್ಲಿ ಪ್ರಮುಖ ಆಟಗಾರರಾಗಿದ್ದಾರೆ.