ಹೈದರಾಬಾದ್: ಕನ್ನಡಿಗ ಅನಿಲ್ ಕುಂಬ್ಳೆ ಬಳಿಕ ಟೀಂ ಇಂಡಿಯಾ ಕಂಡಿರುವ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿದ್ದ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. 41 ವರ್ಷದ ಟರ್ಬನೇಟರ್ 23 ವರ್ಷಗಳ ಕಾಲ ಭಾರತ ತಂಡ ಪ್ರತಿನಿಧಿಸಿದ್ದು, ಹತ್ತಾರು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಇದರ ಜೊತೆಗೆ ಅನೇಕ ವಿವಾದ ಮೈಮೇಲೆ ಸಹ ಎಳೆದುಕೊಂಡಿದ್ದಾರೆ.
2007ರ ಐಸಿಸಿ ಟಿ-20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಹರ್ಭಜನ್ ಸಿಂಗ್ ತಂಡಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಂಕಷ್ಟದ ಸಮಯದಲ್ಲಿ ಪ್ರಮುಖ ವಿಕೆಟ್ ಪಡೆದುಕೊಂಡು ಎದುರಾಳಿ ಬ್ಯಾಟರ್ಗಳಿಗೆ ಮಾರಕವಾಗಿ ಪರಿಣಮಿಸಿದ್ದಾರೆ. ಪ್ರಮುಖವಾಗಿ ಟೆಸ್ಟ್ನಿಂದಲೇ 417 ವಿಕೆಟ್, ಏಕದಿನ ಪಂದ್ಯಗಳಿಂದ 269 ಹಾಗೂ ಚುಟುಕು ಕ್ರಿಕೆಟ್ನಿಂದ 25 ವಿಕೆಟ್ ಪಡೆದುಕೊಂಡಿರುವ ಬಜ್ಜಿ ಒಟ್ಟು 711 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ.
ಇದನ್ನೂ ಓದಿರಿ: ಎಲ್ಲ ಮಾದರಿ ಕ್ರಿಕೆಟ್ಗೆ ವಿದಾಯ ಘೋಷಿಸಿದ ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್
ಅನೇಕ ವಿವಾದಗಳ ಸರಮಾಲೆ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅನೇಕ ವಿವಾದಗಳಿಂದಲೂ ಹರ್ಭಜನ್ ಸಿಂಗ್ ಸುದ್ದಿಯಾಗಿದ್ದರು. ಪ್ರಮುಖವಾಗಿ ಮಂಕಿಗೇಟ್ ವಿವಾದ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಸಿಡ್ನಿ ಟೆಸ್ಟ್ ವೇಳೆ ಬ್ಯಾಟಿಂಗ್ ಮಾಡ್ತಿದ್ದ ಭಜ್ಜಿಗೆ ಆಂಡ್ರ್ಯೂ ಸೈಮಂಡ್ಸ್ ಪ್ರಚೋದನೆ ಮಾಡಿದ್ದರು. ಈ ವೇಳೆ, ಅವಾಚ್ಯ ಶಬ್ದಗಳಿಂದ ಅವರನ್ನ ನಿಂದಿಸಿದ್ದರು. ಇದರ ಬಗ್ಗೆ ದೂರು ದಾಖಲಾಗಿದ್ದರಿಂದ ಭಜ್ಜಿ ಮೇಲೆ ಜಂನಾಗೀಯ ನಿಂದನೆ ಆರೋಪದಡಿ 3 ಪಂದ್ಯಗಳಿಂದ ನಿಷೇಧ ಹೇರಲಾಗಿತ್ತು. ಇದಾದ ಬಳಿಕ ಭಜ್ಜಿ ಆರೋಪಗಳಿಂದ ಮುಕ್ತಗೊಂಡಿದ್ದರು.
ಶ್ರೀಕಾಂತ್ಗೆ ಕಪಾಳಮೋಕ್ಷ ವಿವಾದ: 2008ರ ಐಪಿಎಲ್ ವೇಳೆ ಮುಂಬೈ ಹಾಗೂ ಪಂಜಾಬ್ ನಡುವಿನ ಪಂದ್ಯದ ವೇಳೆ ಹರ್ಭಜನ್ ಸಿಂಗ್ ಬೌಲರ್ ಶ್ರೀಶಾಂತ್ಗೆ ಕಪಾಳಮೋಕ್ಷ ಮಾಡಿದ್ದಾರೆಂಬ ಸುದ್ದಿ ವೈರಲ್ ಆಗಿತ್ತು. ಆದರೆ, ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಹೇಳಿಕೊಂಡಿದ್ದರು. ಮ್ಯಾಚ್ ರೆಫರಿ ನೀಡಿದ್ದ ಸಾಕ್ಷ್ಯಾಧಾರದ ಮೇಲೆ ಹರ್ಭಜನ್ ಸಿಂಗ್ ಅವರಿಗೆ ನಿಷೇಧ ಹೇರಲಾಗಿತ್ತು.
ರಿಕಿ ಪಾಂಟಿಂಗ್ ಜೊತೆ ವಿವಾದ: 1998ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ರಿಕಿ ಪಾಂಟಿಂಗ್ ವಿಕೆಟ್ ಪಡೆದುಕೊಂಡಿದ್ದ ಭಜ್ಜಿ ಸಂಭ್ರಮಾಚರಣೆ ಮಾಡಿದ್ದರು. ಈ ವೇಳೆ ಕೂಡ ಹರ್ಭಜನ್ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆಂಬ ಆರೋಪದ ಮೇಲೆ ಒಂದು ಪಂದ್ಯದಿಂದ ನಿಷೇಧ ಹೇರಲಾಗಿತ್ತು.