ನವದೆಹಲಿ: ಭಾರತದ 26 ಬಲಿಷ್ಠ ಫೀಲ್ಡ್ ಮತ್ತು ಟ್ರ್ಯಾಕ್ ಅಥ್ಲೀಟ್‌ಗಳು ಮಂಗಳವಾರ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ಟೋಕಿಯೋಗೆ ತೆರಳಿದ್ದಾರೆ. ದೇಶದ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್ ಈ ಅಥ್ಲೀಟ್ಗಳಿಗಾಗಿ ಅಥ್ಲೆಟಿಕ್ಸ್ ಫೆಡರೇಷನ್ ಆಯೋಜಿಸಿದ್ದ ಆನ್ಲೈನ್ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗಿಯಾಗಿ, ಕ್ರೀಡಾಕೂಟದಲ್ಲಿ ಒತ್ತಡವನ್ನು ಆನಂದಿಸಬೇಕು. ಆಟದ ಸಂದರ್ಭದಲ್ಲಿ ಮಾನಸಿಕವಾಗಿ ಕುಸಿಯಬೇಡಿ ಎಂದು ಸಲಹೆ ನೀಡಿದರು.
ವರ್ಚುವಲ್ ಈವೆಂಟ್ನಲ್ಲಿ ಭಾಗಿಯಾಗಿದ್ದ ಸಚಿನ್, ಒಲಿಂಪಿಕ್ಸ್ನಲ್ಲಿ ಪಟ್ಟುಬಿಡದೆ ಪದಕ ಗೆದ್ದು ನಿಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಿ. ಕ್ರೀಡೆಯಲ್ಲಿ ಗೆಲುವು ಅಥವಾ ಸೋಲು ಇರುತ್ತದೆ ಎಂದು ಸಾಕಷ್ಟು ಜನ ಹೇಳಬಹುದು. ಆದರೆ ಸೋಲೆಂಬುದು ನಿಮ್ಮ ಎದುರಾಳಿಯದ್ದಾಗಿರಬೇಕು, ಗೆಲುವು ಮಾತ್ರ ನಿಮ್ಮದಾಗಿರಬೇಕೆಂಬುದು ನನ್ನ ಸಂದೇಶ. ನೀವೆಲ್ಲರೂ ಪದಕಕ್ಕಾಗಿ ಅಲ್ಲಿಗೆ ಹೋಗಬೇಕೆಂದು ತೆಂಡೂಲ್ಕರ್ ಕಿವಿಮಾತು ಹೇಳಿದರು.
ಕನಸುಗಳನ್ನು ಹಿಂಬಾಲಿಸುವುದನ್ನು ನಿಲ್ಲಿಸಬೇಡಿ, ಕೊರಳಲ್ಲಿ ಪದಕ ಇರುವುದು, ರಾಷ್ಟ್ರಗೀತೆ ಹೇಳುವುದು ಮತ್ತು ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸುವುದು ನಿಮ್ಮ ಕನಸಾಗಿರಬೇಕು ಎಂದು ಮಾಸ್ಟರ್ ಬ್ಲಾಸ್ಟರ್ ಸ್ಪೂರ್ತಿದಾಯಕ ಮಾತುಗಳನ್ನು ಆಡಿದರು.
26 ಅಥ್ಲೀಟ್‌ಗಳು ಸೇರಿದಂತೆ ಒಟ್ಟು ಟ್ರ್ಯಾಕ್ ಮತ್ತು ಫೀಲ್ಡ್ನಲ್ಲಿ 47 ಸದಸ್ಯರ ಗುಂಪು ಟೋಕಿಯೋಗೆ ತೆರಳಿದೆ. ಇದರಲ್ಲಿ 11 ಮಂದಿ ಕೋಚ್ಗಳು, 8 ಸಹಾಯಕ ಸಿಬ್ಬಂದಿ, ಒಬ್ಬ ವೈದ್ಯ ಮತ್ತು ಓರ್ವ ಟೀಮ್ ಲೀಡರ್ ಇದ್ದಾರೆ. ಜುಲೈ 30 ರಿಂದ ಒಲಿಂಪಿಕ್ಸ್ನಲ್ಲಿ ಅಥ್ಲೆಟಿಕ್ಸ್ ಕ್ರೀಡೆಗಳು ಆರಂಭವಾಗಲಿದೆ.
ಇದನ್ನೂ ಓದಿ: ಐಪಿಎಲ್ ಆಯೋಜನೆ ಯಶಸ್ವಿ, ಡೊಮೆಸ್ಟಿಕ್ ರದ್ದು : ಕಾರಣ ವಿವರಿಸಿದ ಜಯ್ ಶಾ