ಕೋಲ್ಕತ್ತಾ: ಪಾಕಿಸ್ತಾನ ಮತ್ತು ಭಾರತ ಪಂದ್ಯ ಅಂದ್ರೆ ಅಲ್ಲೊಂದು ರೋಚಕತೆ, ಕಾದಾಟ. ಮನರಂಜನೆ ಇದ್ದೇ ಇರುತ್ತದೆ. ಇದನ್ನು ಭಾರತೀಯರು ಮಾತ್ರವಲ್ಲ, ಕ್ರಿಕೆಟ್ ರಂಜಿಸುವ ಎಲ್ಲ ಪ್ರೇಕ್ಷಕರು ಕಾತರದಿಂದ ಕಾಯುತ್ತಾರೆ. ಇಂತಿಪ್ಪ, ಭಾರತದ ಮಾಜಿ ನಾಯಕರೊಬ್ಬರು 'ವಿಶ್ವಕಪ್ನಲ್ಲಿ ಪಾಕಿಸ್ತಾನ ಸೆಮಿಫೈನಲ್ಗೆ ಬರಬೇಕು' ಎಂದು ಆಶಿಸಿದ್ದಾರೆ.
ಅಚ್ಚರಿಯಾದ್ರೂ ಸತ್ಯ. ಪಾಕಿಸ್ತಾನ ಸೋತು ವಿಶ್ವಕಪ್ನಿಂದ ಹೊರಬೀಳಲಿ ಎಂದು ಅಂದುಕೊಳ್ಳುವವರೇ ಹೆಚ್ಚಿರಬೇಕಾದರೆ, ಇದ್ಯಾರಪ್ಪ ಸೆಮೀಸ್ಗೆ ಬರಬೇಕು ಅಂತ ಕೇಳಿದ್ದು ಅಂತೀರಾ. ಅವರು ಮತ್ಯಾರೂ ಅಲ್ಲ ಭಾರತ ತಂಡದ ಮಾಜಿ ನಾಯಕ, ಬೆಂಗಾಲ್ ಟೈಗರ್ ಖ್ಯಾತಿಯ ಸೌರವ್ ಗಂಗೂಲಿ..!
ಇಲ್ಲಿ ನಡೆಯುತ್ತಿರುವ ಐಪಿಎಲ್ ಫ್ರಾಂಚೈಸಿ ದೆಹಲಿ ಕ್ಯಾಪಿಟಲ್ಸ್ನ ಶಿಬಿರದಲ್ಲಿ ಮಾತನಾಡಿರುವ ಅವರು, ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ಆಡಬೇಕು ಎಂದು ಕೋರುವೆ. ಇದರಿಂದ ಪ್ರೇಕ್ಷಕರಿಗೆ ರಂಜನೆಯ ಪಂದ್ಯವನ್ನು ವೀಕ್ಷಿಸಲು ಅವಕಾಶ ಸಿಗುತ್ತದೆ. ಭಾರತ ಸತತ ಎಂಟು ಪಂದ್ಯಗಳಲ್ಲಿ ಗೆದ್ದು ಅಜೇಯವಾಗಿ ಉಳಿದಿದೆ. ಸೆಮೀಸ್ನಲ್ಲಿ ಇತ್ತಂಡಗಳು ಎದುರಾದರೆ, ಮತ್ತೊಮ್ಮೆ ಕ್ರಿಕೆಟ್ ರಸದೌತಣ ಸವಿಯಬಹುದು ಎಂದು ಅಭಿಪ್ರಾಯಪಟ್ಟರು.
ಶಮಿ ವಿಶ್ವಕಪ್‌ನ ಶ್ರೇಷ್ಠ ಬೌಲರ್: ಮೊಹಮ್ಮದ್ ಶಮಿ ಬೌಲಿಂಗ್ ಹಾಡಿ ಹೊಗಳಿದ ಗಂಗೂಲಿ, ಶಮಿ ವಿಶ್ವಕಪ್‌ನ ಅತ್ಯುತ್ತಮ ಬೌಲರ್. ಅವರ ಕರಾರುವಾಕ್ ದಾಳಿ ಎಂತಹ ತಂಡವು ಭಯಪಡುವಂತೆ ಮಾಡಿದೆ. ಫೈನಲ್ವರೆಗೂ ಅವರು ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಲಿ ಎಂದು ಸಲಹೆ ನೀಡಿದರು.
ನಾಯಕ ರೋಹಿತ್ ಶರ್ಮಾ ಬಳಗ ಸತತ ಗೆಲುವು ಸಾಧಿಸುತ್ತಿರುವುದರ ಬಗ್ಗೆ ಮಾತನಾಡಿದ ಅವರು, ಲೀಗ್ನಲ್ಲಿ ಎಲ್ಲ ಪಂದ್ಯ ಗೆದ್ದ ಮಾತ್ರಕ್ಕೆ ತಂಡದ ಕೆಲಸ ಮುಗಿದಿಲ್ಲ. ಮುಖ್ಯ ಘಟ್ಟ ಈಗಷ್ಟೇ ಆರಂಭವಾಗಿದೆ. 2003 ರಲ್ಲಿ ನನ್ನ ನೇತೃತ್ವದಲ್ಲಿ ತಂಡ ಫೈನಲ್ ತಲುಪಿ ಸೋಲು ಕಂಡಿತು. 2019 ರಲ್ಲಿ ಸೆಮೀಸ್ನಲ್ಲಿ ಸೋತಿತು. ಅದು ಮತ್ತೆ ಮರುಕಳಿಸಬಾರದು. ಹೀಗಾಗಿ ತಂಡ ಸೆಮೀಸ್, ಫೈನಲ್ಗಳನ್ನೂ ಗೆದ್ದು ಕಪ್ ಎತ್ತುವುದುನ್ನು ನೋಡಲು ಬಯಸುವೆ ಎಂದರು.
ಮ್ಯಾಕ್ಸ್ವೆಲ್ ಆಟ ಅದ್ಭುತ, ಶ್ರೇಷ್ಠವಲ್ಲ: ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್ವೆಲ್ ಅದ್ಭುತವಾಗಿ ಆಡಿದರು. ಆದರೆ, ಅದು ಏಕದಿನ ಇತಿಹಾಸದ ಶ್ರೇಷ್ಠ ಪ್ರದರ್ಶನವಲ್ಲ. ಅವರು ಆಡಿದ್ದು, ಆದರೆ ಅತ್ಯುತ್ತಮ ಬೌಲಿಂಗ್ ಲೈನ್ ಅಪ್ ಇರುವ ತಂಡವ ವಿರುದ್ಧವಲ್ಲ. ಅತ್ಯುತ್ತಮ ನಾಯಕತ್ವವೂ ಅಲ್ಲಿರಲಿಲ್ಲ. ಇದಕ್ಕಿಂತಲೂ ಉತ್ತಮವಾದ ಇನಿಂಗ್ಸ್ಗಳನ್ನು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಆಡಿದ್ದನ್ನು ನಾವು ನೋಡಿದ್ದೇವೆ. ಆದರೆ, ತಂಡ ಸೋಲಿನ ಸುಳಿಯಲ್ಲಿದ್ದಾಗ, ಗಾಯಗೊಂಡ ಮ್ಯಾಕ್ಸಿ ಅಂತಹ ಇನಿಂಗ್ಸ್ ಕಟ್ಟಿದ್ದು ನಿಜಕ್ಕೂ ಶ್ಲಾಘನೀಯ ಎಂದು ಹೇಳಿದರು.
ಸೆಮೀಸ್ಗೆ ಬರುತ್ತಾ ಪಾಕಿಸ್ತಾನ?: ಗುರುವಾರ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ ಗೆಲುವು ಸಾಧಿಸಿದ್ದು, ಸೆಮೀಸ್ಗೆ ಇನ್ನಷ್ಟು ಹತ್ತಿರವಾಗಿದೆ. ಪಾಕಿಸ್ತಾನ ನವೆಂಬರ್ 11 ರಂದು ಇಂಗ್ಲೆಂಡ್ ವಿರುದ್ಧ ಕೊನೆಯ ಪಂದ್ಯವಾಡಲಿದೆ. ಈ ಪಂದ್ಯದಲ್ಲಿ ಪಾಕ್ 287 ರನ್ಗಳ ಅಂತರದಲ್ಲಿ ಗೆಲುವು ಸಾಧಿಸಿದಲ್ಲಿ ನೆಟ್ ರನ್ರೇಟ್ ಮೂಲಕ ಸೆಮೀಸ್ ಪ್ರವೇಶಿಸಲಿದೆ. ಸೋತಲ್ಲಿ ತವರಿನ ಹಾದಿ ಹಿಡಿಯಲಿದೆ.
ಇದನ್ನೂ ಓದಿ: ಕಿವೀಸ್ ಗೆಲ್ಲಬೇಕು, ಭಾರತದ ಎದುರು ಸೆಮೀಸ್ ಆಡಬೇಕು: ಚಿನ್ನಸ್ವಾಮಿಯಲ್ಲಿ ಅಭಿಮಾನಿಗಳ ಆಶಯ