ನವ ದೆಹಲಿ: ಹಾರ್ದಿಕ್ ಪಾಂಡ್ಯ ಹಾಗು ಪೃಥ್ವಿ ಶಾ ಭಾರತ ಕ್ರಿಕೆಟ್ ತಂಡದ ಭವಿಷ್ಯ ನಾಯಕರು ಎಂದು ಗೌತಮ್ ಗಂಭೀರ್ ಭವಿಷ್ಯ ನುಡಿದಿದ್ದಾರೆ. ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ (ಎಫ್‌ಐಸಿಸಿಐ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2021 ರ ಐಪಿಎಲ್‌ನಲ್ಲಿ ಪಾಂಡ್ಯ ಮುನ್ನಡೆಸಿದ ಗುಜರಾತ್ ಟೈಟಾನ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇದಾದ ಬಳಿಕ ಐರ್ಲೆಂಡ್ ಪ್ರವಾಸದಲ್ಲೂ ಅವರ ನಾಯಕತ್ವದ ತಂಡ 2-0 ಮೂಲಕ ಸರಣಿ ಕೈವಶ ಮಾಡಿಕೊಂಡಿತ್ತು. ರೋಹಿತ್, ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್‌ರಂತಹ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್‌ನಲ್ಲಿ ನಡೆದ ಟಿ20ಯನ್ನೂ ತಂಡ ಗೆದ್ದುಕೊಂಡಿದೆ. ಹೀಗಾಗಿ, ಹಾರ್ದಿಕ್ ನಿಸ್ಸಂಶಯವಾಗಿ ಅತ್ಯುತ್ತಮ ನಾಯಕ ಎಂದು ಗಂಭೀರ್ ಕೊಂಡಾಡಿದರು.
ಇನ್ನು, ಪೃಥ್ವಿ ಶಾ ಅತ್ಯಂತ ಯಶಸ್ವಿ, ಆಕ್ರಮಣಕಾರಿ ನಾಯಕನಾಗಬಹುದು ಎಂದು ನಾನು ಭಾವಿಸುತ್ತೇನೆ. ಆತ ಕ್ರೀಡೆಯನ್ನು ಆಡುವ ರೀತಿಯಲ್ಲಿ ಆಕ್ರಮಣಶೀಲತೆಯನ್ನು ನೀವು ನೋಡಿದ್ದೀರಿ ಎಂದರು. ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಟಿ20 ಪಂದ್ಯಗಳಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಕೂಡಾ ಪೃಥ್ವಿ ಶಾ ಎಂದರು.
ಇದನ್ನೂ ಓದಿ :ರಿಷಭ್ ಪಂತ್ ಭವಿಷ್ಯದಲ್ಲಿ ಭಾರತದ ನಾಯಕನಾಗಲಿದ್ದಾರೆ: ಸುನೀಲ್ ಗವಾಸ್ಕರ್