ಮುಂಬೈ: ಟೀಂ ಇಂಡಿಯಾ ಮಹಿಳಾ ಕ್ರಿಕೆಟ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಶಿವ ಸುಂದರ್ ದಾಸ್ ಆಯ್ಕೆಯಾಗಿದ್ದು, ಭಾರತೀಯ ಕ್ರಿಕೆಟ್ ಮಂಡಳಿ ಟೆಸ್ಟ್ ಕ್ರಿಕೆಟ್ನ ಮಾಜಿ ಆರಂಭಿಕ ಬ್ಯಾಟ್ಸಮನ್ಗೆ ಮಣೆ ಹಾಕಿದೆ.
ಈಗಾಗಲೇ ಮಹಿಳಾ ತಂಡಕ್ಕೆ ಮುಖ್ಯ ಕೋಚ್ ಆಗಿ ರಮೇಶ್ ಪೊವಾರ್ ಆಯ್ಕೆಯಾಗಿದ್ದು, ಇದರ ಬೆನ್ನಲ್ಲೇ ಬ್ಯಾಟಿಂಗ್ ಕೋಚ್ ಆಗಿ ಶಿವಸುಂದರ್ ದಾಸ್ ನೇಮಕವಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಏಕದಿನ, ಟೆಸ್ಟ್ ಹಾಗೂ ಟಿ-20 ಕ್ರಿಕೆಟ್ ಸರಣಿಗಾಗಿ ಮಹಿಳಾ ತಂಡ ಈಗಾಗಲೇ ಆಯ್ಕೆಯಾಗಿರುವ ಕಾರಣ, ಬ್ಯಾಟಿಂಗ್ ಕೋಚ್, ಫಿಲ್ಡಿಂಗ್ ಕೋಚ್ಗಳಿಗೆ ಬಿಸಿಸಿಐ ಆಯ್ಕೆ ಮಾಡಿದೆ. ಡೆಲ್ಲಿ ತಂಡದ ವಿಕೆಟ್ ಕೀಪರ್ ಬ್ಯಾಟ್ಸಮನ್ ಅಭಯ್ ಶರ್ಮಾ ಫೀಲ್ಡಿಂಗ್ ಕೋಚ್ ಆಗಿ ಸೇವೆ ನೇಮಕಗೊಂಡಿದ್ದಾರೆ.
ಶಿವ ಸುಂದರ್ ದಾಸ್ ಟೀಂ ಇಂಡಿಯಾ ಪರ 2000 ರಿಂದ 2002ರ ಅವಧಿಯಲ್ಲಿ 23 ಟೆಸ್ಟ್ ಪಂದ್ಯಗಳನ್ನಾಡಿದ್ದು, 2 ಶತಕ ಸೇರಿದಂತೆ 1,326ರನ್ಗಳಿಕೆ ಮಾಡಿದ್ದಾರೆ. ಶಿವ ಸುಂದರ್ ದಾಸ್ ಈಗಾಗಲೇ ಇಂಡಿಯಾ ಮಹಿಳಾ ಎ ತಂಡದೊಂದಿಗೆ ಕೆಲಸ ಮಾಡಿದ್ದು, ಇದೀಗ ಹಿರಿಯರ ತಂಡ ಸೇರಿಕೊಳ್ಳಲಿದ್ದಾರೆ. ಇಂಡಿಯಾ ಎ ತಂಡದ ಕ್ಯಾಪ್ಟನ್ ಆಗಿ ಶಿವ ಸುಂದರ್ ದಾಸ್ ಬ್ಯಾಟಿಂಗ್ನಲ್ಲಿ ಗಮನ ಸೆಳೆದಿದ್ದರು.
ಇದಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅವರು, ಮಹಿಳಾ ತಂಡವನ್ನ ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಕೆಲಸ ಮಾಡುವುದಾಗಿ ಹೇಳಿದ್ದು, ನನಗೆ ಇದೊಂದು ಉತ್ತಮ ಚಾಲೆಂಜ್ ಆಗಿದೆ ಎಂದಿದ್ದಾರೆ. ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಜೂನ್ ತಿಂಗಳಲ್ಲಿ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ಜುಲೈನಲ್ಲಿ ಟಿ-20 ಕ್ರಿಕೆಟ್ನಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲಿವೆ.