ಕೋಲ್ಕತ್ತಾ: ಭಾರತೀಯ ಮಾಜಿ ಆರಂಭಿಕ ಬ್ಯಾಟರ್ ಅರುಣ್ ಲಾಲ್ ತಮ್ಮ 66 ನೇ ವಯಸ್ಸಿನಲ್ಲಿ ಎರಡನೇ ವಿವಾಹವಾಗಲಿದ್ದಾರೆ. ವರದಿಗಳ ಪ್ರಕಾರ ಮಾಜಿ ಕ್ರಿಕೆಟಿಗ ವಿವಾಹವಾಗಲಿರುವ ವಧುವಿನ ಹೆಸರು ಬುಲ್ಬುಲ್ ಸಾಹಾ ಆಕೆ ಅರುಣ್ ಲಾಲ್ಗಿಂತ 28 ವರ್ಷ ಚಿಕ್ಕವರೆಂದು ತಿಳಿದುಬಂದಿದೆ.
ಈ ಮದುವೆ ಮೇ 2 ರಂದು ಕೋಲ್ಕತ್ತಾದ ಹೋಟೆಲ್‌ನಲ್ಲಿ ನಡೆಯಲಿದೆ ಎಂದು ಮಾಹಿತಿಯಿದೆ. ಬುಲ್ಬುಲ್ ಸಹಾ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದಾರೆ. ಇವಬ್ಬರೂ ಬಹಳ ದಿನಗಳಿಂದ ಒಬ್ಬರಿಗೊಬ್ಬರು ಪರಿಚಿತರಾಗಿದ್ದು, ಅರುಣ್ ಪ್ರಸ್ತುತ ಬಂಗಾಳದ ರಣಜಿ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಅರುಣ್ ಲಾಲ್ ಅವರ ಮೊದಲ ವಿವಾಹ ರೀನಾ ಎಂಬುವವರೊಡನೆ ಆಗಿದ್ದು, ಇದೀಗ ಪರಸ್ಪರ ಒಪ್ಪಿಗೆಯ ನಂತರ ವಿಚ್ಛೇದನ ಪಡೆದುಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ತಮ್ಮ ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದುಕೊಂಡ ನಂತರ ಬುಲ್ ಬುಲ್ ಸಾಹಾ ಅವರೊಂದಿಗೆ ದ್ವಿತೀಯ ವಿವಾಹವಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ವರದಿಯ ಪ್ರಕಾರ, ಅರುಣ್ ಲಾಲ್ ಒಂದು ತಿಂಗಳ ಹಿಂದೆ 38 ವರ್ಷದ ಬುಲ್ಬುಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರೂ ಮದುವೆಯಾಗಲಿದ್ದಾರೆ. ಲಾಲ್ ತನ್ನ ಮೊದಲ ಪತ್ನಿ ರೀನಾದಿಂದ ವಿಚ್ಛೇದನ ಪಡೆದಿದ್ದಾರೆ, ಆದರೂ ರೀನಾ ಅವರಿಗೆ ಅನಾರೋಗ್ಯದ ಕಾರಣ, ಕೆಲವು ದಿನಗಳಿಂದ ವಾಸಿಸುತ್ತಿದ್ದಾರೆಂದು ತಿಳಿದು ಬಂದಿದೆ. ಅಲ್ಲದೇ ಬುಲ್ಬುಲ್ ಅವರೊಂದಿಗೆ ವಿವಾಹದ ಬಳಿಕವೂ ಅನಾರೋಗ್ಯ ಪೀಡಿತೆ ರೀನಾ ಅವರನ್ನು ನೋಡಿಕೊಳ್ಳಲಿದ್ದಾರೆ ಎಂಬ ಮಾಹಿತಿಯಿದೆ.
ಅರುಣ್ ಲಾಲ್ ಅವರ ವಿವಾಹಕ್ಕೆ ಬೆಂಗಾಲ್ ಕ್ರಿಕೆಟ್ ಮಂಡಳಿಯ ಸದಸ್ಯರು ಮತ್ತು ಬೆಂಗಾಲ್ ತಂಡದ ಕ್ರಿಕೆಟಿಗರು ಕೂಡ ಹಾಜರಾಗಲಿದ್ದಾರೆ.
ಅರುಣ್ ಲಾಲ್ ಆಗಸ್ಟ್ 1, 1955 ರಂದು ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಜನಿಸಿದರು. ಅವರು ಭಾರತ ತಂಡದ ಪರ 16 ಟೆಸ್ಟ್ ಮತ್ತು 13 ODI ಪಂದ್ಯಗಳನ್ನಾಡಿದ್ದು, ಕ್ರಮವಾಗಿ 729 ಮತ್ತು 122 ರನ್ ಗಳಿಸಿದರು. ಅರುಣ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಯಶಸ್ವಿಯಾಗದಿದ್ದರೂ, ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ 156 ಪಂದ್ಯಗಳನ್ನಾಡಿದ್ದಾರೆ.
ಇದರಲ್ಲಿ ಅವರು 30 ಶತಕಗಳ ಸಹಿತ 10,421 ರನ್ ಗಳಿಸಿದ್ದಾರೆ. ನಿವೃತ್ತಿ ನಂತರ ಕಾಮೆಂಟೇಟರ್ ಆಗಿದ್ದ ಅವರಿಗೆ 6 ವರ್ಷಗಳ ಹಿಂದೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಅದಕ್ಕೆ ಕಾಮೆಂಟರಿ ಬಿಟ್ಟಿದ್ದ ಅವರು, ಇದೀಗ ಚೇತರಿಸಿಕೊಂಡು ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಜಡೇಜಾ ಸಿಎಸ್‌ಕೆ ಮಾತ್ರವಲ್ಲ, ಭಾರತವನ್ನೂ ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ: ರಾಯುಡು