ಹೈದರಾಬಾದ್ : ಹೈದರಾಬಾದ್ನ ಮಾಜಿ ವೇಗದ ಬೌಲರ್ ಅಶ್ವಿನ್ ಯಾದವ್ ಹೃದಯಾಘಾತದಿಂದ ಶನಿವಾರ ಮೃತಪಟ್ಟಿದ್ದಾರೆ.
33 ವರ್ಷದ ಅಶ್ವಿನ್, ಪತ್ನಿ ಮತ್ತು 3 ಗಂಡು ಮಕ್ಕಳನ್ನು ಅಗಲಿದ್ದಾರೆ. ಯಾದವ್ 2007ರಲ್ಲಿ ಪಂಜಾಬ್ ವಿರುದ್ಧ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅವರು ಹೈದರಾಬಾದ್ ಪರ 14 ಪ್ರಥಮ ದರ್ಜೆ ಪಂದ್ಯಗಳನ್ನಾಡಿದ್ದು, 34 ವಿಕೆಟ್ ಪಡೆದಿದ್ದರು. 208-09ರಲ್ಲಿ ಡೆಲ್ಲಿ ವಿರುದ್ಧ ಉಪ್ಪಲ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದಲ್ಲಿ 52 ರನ್ ನೀಡಿ 6 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವಾಗಿದೆ.
ಅಶ್ವಿನ್ 2009ರಲ್ಲಿ ಮುಂಬೈ ವಿರುದ್ಧ ತಮ್ಮ ಕೊನೆಯ ರಣಜಿ ಪಂದ್ಯವನ್ನಾಡಿದ್ದರು. ಆದರೆ, ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಪರ ಸ್ಥಳೀಯ ಲೀಗ್ಗಳಲ್ಲಿ ಆಡುವುದನ್ನು ಮುಂದುವರಿಸಿದ್ದರು. ಯಾದವ್ 10 ಲಿಸ್ಟ್ ಎ ಮತ್ತು 2 ಟಿ20 ಪಂದ್ಯಗಳನ್ನು ಆಡಿದ್ದಾರೆ.
ಯಾದವ್ ನಿಧನಕ್ಕೆ ಭಾರತ ತಂಡದ ಫೀಲ್ಡಿಂಗ್ ಕೋಚ್ ಆರ್.ಶ್ರೀದರ್ ಸಂತಾಪ ಸೂಚಿಸಿದ್ದಾರೆ." ಅಶ್ವಿನ ಯಾದವ್ ಅವರ ಅಗಲಿಕೆಯ ಸುದ್ದಿ ಕೇಳಿ ದುಃಖವಾಗಿದೆ. ಅವರು ತುಂಬಾ ಖುಷಿಯ ಮತ್ತು ಮೋಜಿನ ವ್ಯಕ್ತಿ, ಅವರೊಬ್ಬ ತಂಡದ ಆಟಗಾರನಾಗಿ ಕೌಶಲ್ಯಕ್ಕಿಂತ ಹೆಚ್ಚಿನದನ್ನು ತೋರಿಸುತ್ತಿದ್ದರು. ಈ ಸಂದರ್ಭದಲ್ಲಿ ಅವರ ಸಾವಿನ ದುಃಖವನ್ನು ತಡೆದುಕೊಳ್ಳುವ ಶಕ್ತಿ ದೊರೆಯಲಿ ಎಂದು ದೇವರನ್ನು ಪ್ರಾರ್ಥಿಸುತ್ತೇನೆ"ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: ಮಹಾಮಾರಿ ಕೊರೊನಾಗೆ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ ತಾಯಿ ಬಲಿ