ನವದೆಹಲಿ : ಇಂಗ್ಲೆಂಡ್ನ ಮಾಜಿ ವೇಗದ ಬೌಲರ್ ಜೇಡ್ ಡರ್ನ್ಬೇಚ್ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ಮನಸ್ಸು ಮಾಡಿದ್ದಾರೆ. ಈಗಷ್ಟೆ ಕ್ರಿಕೆಟ್ನಲ್ಲಿ ಕಣ್ಣು ಬಿಡುತ್ತಿರುವ ಇಟಲಿ ರಾಷ್ಟ್ರೀಯ ತಂಡದ ಪರ ಆಡುವುದಕ್ಕೆ ಅರ್ಹತೆ ಪಡೆದುಕೊಂಡಿದ್ದಾರೆ.
ಡರ್ನ್ಬೇಚ್ ಜೋಹನ್ಸ್ ಬರ್ಗ್ನಲ್ಲಿ ಜನಿಸಿದ್ದರು. ತಮ್ಮ 14ನೇ ವಯಸ್ಸಿನಲ್ಲಿ ಇಂಗ್ಲೆಂಡ್ಗೆ ತೆರಳಿ ಅಲ್ಲಿನ ನಾಗರಿಕತ್ವ ಪಡೆದು ಕ್ರಿಕೆಟ್ ಜೀವನ ಆರಂಭಿಸಿದ್ದ ಅವರು, 2011ರಿಂದ 2014ರವರೆಗೆ ಇಂಗ್ಲೆಂಡ್ 58 ಸೀಮಿತ ಓವರ್ಗಳ ಪಂದ್ಯಗಳನ್ನಾಡಿದ್ದರು. ನಿವೃತ್ತಿ ನಂತರ ಸರ್ರೆ ಕ್ಲಬ್ ಪರ ಆಡಿದ್ದರು.
ಇದೀಗ ಅವರ ತಾಯಿಯ ತವರೂರಾದ ಇಟಲಿಯನ್ನು ಪ್ರತಿನಿಧಿಸುವುದಕ್ಕೆ ಅರ್ಹತೆ ಪಡೆದಿರುವ ಅವರು, ಮುಂದಿನ ತಿಂಗಳಿನಿಂದ ಆರಂಭವಾಗಲಿರುವ 2022ರ ಟಿ20 ವಿಶ್ವಕಪ್ ಅರ್ಹತಾ ಟೂರ್ನಿಯಲ್ಲಿ ಇಟಲಿ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಇಟಲಿ ತಂಡವನ್ನು ಮಾಜಿ ಇಂಗ್ಲೆಂಡ್ ಕೌಂಟಿ ಆಟಗಾರ ಗೆರಾತ್ ಬರ್ಗ್ ಮುನ್ನಡೆಸುತ್ತಿದ್ದಾರೆ. ಇವರು ತಂಡದ ಮುಖ್ಯ ಕೋಚ್ ಕೂಡ ಆಗಿದ್ದು, ಇವರಿಗೆ ಮಾಜಿ ಇಂಗ್ಲೆಂಡ್ ಆಲ್ರೌಂಡರ್ ಒವಾಯಿಸ್ ಶಾ ಅಸಿಸ್ಟೆಂಟ್ ಕೋಚ್ ಆಗಿದ್ದಾರೆ. ಡರ್ನ್ಬೇಚ್ ಇಟಲಿ ಸೇರುವುದರಲ್ಲಿ ಬರ್ಗ್ ಪಾತ್ರ ಮಹತ್ವವಾಗಿದೆ.
ಇಟಲಿ ಅಕ್ಟೋಬರ್ 15-21ರವರೆಗೆ ಸ್ಪೇನ್ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಯೂರೋಪ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಜೆರ್ಸಿ, ಜರ್ಮನಿ ಮತ್ತು ಡೆನ್ಮಾರ್ಕ್ ತಂಡಗಳೊಂದಿಗೆ ಪೈಪೋಟಿ ನಡೆಸಲಿದೆ. ಇಲ್ಲಿ ಗೆಲ್ಲುವ ಟಾಪ್ 2 ತಂಡ ಗ್ಲೋಬಲ್ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿವೆ.
ಇದನ್ನು ಓದಿ:ಟಿ20 ವಿಶ್ವಕಪ್ನಲ್ಲಿ ಕೆಕೆಆರ್ ತಂಡದ ಈ ಬೌಲರ್ ಭಾರತದ ಪ್ರಮುಖ ಅಸ್ತ್ರ : ಇರ್ಫಾನ್ ಪಠಾಣ್