ನವದೆಹಲಿ: ದೇಶದಲ್ಲಿ ಕ್ರೀಡೆಯ ಬಗ್ಗೆ ಚರ್ಚೆಗಳಾಗುತ್ತಿರುವುದು ಒಳ್ಳೆಯ ವಿಷಯ. ಭಾರತ ಕ್ರೀಡೆಯಲ್ಲಿ ಬಹಳಷ್ಟು ಪ್ರಗತಿ ಸಾಧಿಸಿದೆ. ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅಂತಿಮ ಪಂದ್ಯವನ್ನು ಗೆಲ್ಲಲಾಗಲಿಲ್ಲ. ಇದು ಆಟಗಾರರ ಸಮೇತ ಅಭಿಮಾನಿಗಳಿಗೂ ಬೇಸರ ತರಿಸಿದೆ. ಇದಕ್ಕೆ ಆಟಗಾರರು ಕುಗ್ಗಬೇಕಾಗಿಲ್ಲ ಎಂದು 1983ರ ವಿಶ್ವಕಪ್ ವಿಜೇತ ತಂಡದ ನಾಯಯ ಕಪಿಲ್ ದೇವ್ ಹೇಳಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಅವರು ಮಂಗಳವಾರ ದೆಹಲಿಯ ಬಿಎಲ್ಕೆ -ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸುಧಾರಿತ ಕ್ರೀಡಾ ಪುನರ್ವಸತಿ ಕೇಂದ್ರವನ್ನು ಉದ್ಘಾಟಿಸಲು ಆಗಮಿಸಿದ್ದರು. ಸುಧಾರಿತ ಕ್ರೀಡಾ ವೈದ್ಯಕೀಯ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಇದರ ಉದ್ಘಾಟನೆಗೆ ಬಂದ ವೇಳೆ ಕಪಿಲ್ ದೇವ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ: ನಮ್ಮ ತಂಡದ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ಮಾಜಿ ಹಿರಿಯ ಕ್ರಿಕೆಟಿಗ ಹೇಳಿದ್ದಾರೆ. ನಾವು ಗೆಲ್ಲಲು ಸಾಧ್ಯವಾಗಲಿಲ್ಲ ಎಂದು ಕೆಲವರು ಕೋಪಗೊಂಡಿದ್ದಾರೆ, ಆದರೆ ನೀವು ಗೆದ್ದಾಗ ಯಾರೂ ಚರ್ಚಿಸುವುದಿಲ್ಲ. ನೀವು ಸೋತಾಗ, ಅದು ಎಲ್ಲೆಡೆ ಚರ್ಚೆಯಾಗುತ್ತದೆ. ವಾಸ್ತವವಾಗಿ, ಮತ್ತೊಮ್ಮೆ ವಿಶ್ವಕಪ್ ಗೆಲ್ಲುವ ಟೀಮ್ ಇಂಡಿಯಾದ ಕನಸು ನನಸಾಗಲಿಲ್ಲ. ಭಾರತದ ಸೋಲಿನಿಂದ ಇಡೀ ಭಾರತ ತಂಡದ ಜೊತೆಗೆ ಕೋಟ್ಯಂತರ ದೇಶವಾಸಿಗಳೂ ನಿರಾಸೆ ಅನುಭವಿಸಿದ್ದಾರೆ.
ಇಂದು ನಾವು ಭಾರತದ ಬಗ್ಗೆ ಚರ್ಚಿಸಲು ಪ್ರಾರಂಭಿಸಿರುವುದು ತುಂಬಾ ಒಳ್ಳೆಯದು. ಕಳೆದ 40 ವರ್ಷಗಳಲ್ಲಿ ಭಾರತ ಕ್ರೀಡೆಯಲ್ಲಿ ಉತ್ತಮ ಬೆಳವಣಿಗೆಯನ್ನು ಸಾಧಿಸಿದೆ. ಕ್ರೀಡೆಯ ಬಗ್ಗೆ ಚರ್ಚೆಗಳಾಗುತ್ತಿರುವುದು ಅದರ ಬೆಳವಣಿಗೆಗೆ ಪ್ರಮುಖ ಕಾರಣ. ಇದು ನಾನಾ ಕ್ರೀಡೆಗಳಲ್ಲಿ ಆಟಗಾರರು ಸಾಧನೆ ಮಾಡುವುದಕ್ಕೆ ಕಾರಣವಾಗಿದೆ ಎಂದಿದ್ದಾರೆ.
ಸದ್ಯಕ್ಕೆ, ಕ್ರೀಡಾ ಗಾಯಗಳ ಬಗ್ಗೆ ಮಾತನಾಡಬೇಕು. ಗಾಯದ ನಂತರ, ಆ ಕ್ಷಣ ಆಟಗಾರನಿಗೆ ತುಂಬಾ ಅಪಾಯಕಾರಿ. ತ್ವರಿತವಾಗಿ ಚೇತರಿಸಿಕೊಳ್ಳುವುದು ಹೇಗೆ ಎಂದು ಆಟಗಾರನಿಗೆ ತಿಳಿದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಆಸ್ಪತ್ರೆ ಮುಂದುವರೆದ ಕ್ರೀಡಾ ರಿಹ್ಯಾಬಿಲಿಟೇಶನ್ ಕೇಂದ್ರವನ್ನು ಪ್ರಾರಂಭಿಸಿದೆ. ಇದು ಆಟಗಾರರ ಚೇತರಿಕೆಗೆ ಬಹಳ ಸಹಾಯಕವಾಗಿದೆ ಎಂದು ಕಪಿಲ್ ಹೇಳಿದ್ದಾರೆ.
ಫೈನಲ್ ಪಂದ್ಯ: ಭಾನುವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023ರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿ ಆಗಿತ್ತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಭಾರತ 241 ರನ್ಗಳ ಗುರಿಯನ್ನು ಆಸ್ಟ್ರೇಲಿಯಾಕ್ಕೆ ನೀಡಿತ್ತು. ಇದನ್ನು ಬೆನ್ನತ್ತಿದ ಕಾಂಗರೂ ಪಡೆ 7 ಓವರ್ ಮತ್ತು 6 ವಿಕೆಟ್ ಉಳಿಸಿಕೊಂಡು ಪಂದ್ಯವನ್ನು ಜಯಿಸಿತು. ಆಸೀಸ್ ತಂಡ 6ನೇ ಬಾರಿಗೆ ಏಕದಿನ ವಿಶ್ವಕಪ್ ಚಾಂಪಿಯನ್ ಆಯಿತು.
ಇದನ್ನೂ ಓದಿ: ತಂಡದಲ್ಲಿ ಸಂಜು ಸ್ಯಾಮ್ಸನ್ಗೆ ಸ್ಥಾನ ಏಕಿಲ್ಲ?; ಬಿಸಿಸಿಐ ವಿರುದ್ಧ ನೆಟ್ಟಿಗರ ಕಿಡಿ