ದೋಹಾ: ಭಾರತ ಕ್ರಿಕೆಟ್ ತಂಡದ ಯಶಸ್ವಿ ನಾಯಕರಲ್ಲೊಬ್ಬರಾದ ಎಂ.ಎಸ್.ಧೋನಿ ತಮ್ಮ ನಾಯಕತ್ವ ಚಾಣಾಕ್ಷತನವಲ್ಲದೆ, ಫಿಟ್ನೆಸ್ನಿಂದಲೂ ಸಹ ಯುವ ಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ. 40ರ ಹರೆಯದಲ್ಲೂ ಫಿಟ್ ಆಗಿದ್ದು, ಮುಂಬರುವ ಐಪಿಎಲ್ಗೆ ಸಜ್ಜಾಗುತ್ತಿರುವ ಧೋನಿ ಬಗ್ಗೆ ಮಾತನಾಡಿರುವ ಆಸೀಸ್ ಹಾಗೂ ಸಿಎಸ್ಕೆ ಮಾಜಿ ಆಲ್ರೌಂಡರ್ ಶೇನ್ ವ್ಯಾಟ್ಸನ್, "ಎಂಎಸ್ಡಿ ಮುಂದಿನ 3ರಿಂದ 4 ವರ್ಷಗಳ ಕಾಲ ಆಡಲು ಫಿಟ್ ಆಗಿದ್ದಾರೆ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸಿಗೆ ಧೋನಿಯೇ ಪ್ರಮುಖ ಕಾರಣ" ಎಂದಿದ್ದಾರೆ.
ಪ್ರಸ್ತುತ ದೋಹಾದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (ಎಲ್‌ಎಲ್‌ಸಿ) ಟೂರ್ನಿಯಲ್ಲಿ ಆಡುತ್ತಿರುವ ಶೇನ್ ವ್ಯಾಟ್ಸನ್, ಕ್ಯಾಪ್ಟನ್ ಕೂಲ್ ಧೋನಿ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. "ಇದು (2023ರ ಆವೃತ್ತಿ) ಎಂ.ಎಸ್.ಧೋನಿಯ ಕೊನೆಯ ಐಪಿಎಲ್ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ನನಗೆ ಹಾಗೆ ಅನ್ನಿಸುತ್ತಿಲ್ಲ. ಧೋನಿ ಇನ್ನೂ ಮೂರರಿಂದ ನಾಲ್ಕು ವರ್ಷಗಳ ತನಕ ಆಟ ಮುಂದುವರೆಸಬಹುದು. ಧೋನಿ ಇನ್ನೂ ಸಹ ಬಹಳ ಫಿಟ್ ಆಗಿದ್ದಾರೆ. ಅವರ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ನಿಜವಾಗಿಯೂ ಉತ್ತಮವಾಗಿದೆ. ಜೊತೆಗೆ ಅವರ ಆಟದಂತೆಯೇ ನಾಯಕತ್ವವೂ ಅದ್ಭುತವಾಗಿದೆ. ಫಿಟ್ನೆಸ್ ಹೊಂದಿರುವುದು ಮತ್ತು ಪಂದ್ಯದ ಗತಿಯನ್ನು ಅರ್ಥೈಸಿಕೊಳ್ಳುವ ಬಗೆಯು ಯಶಸ್ವಿ ನಾಯಕನನ್ನು ರೂಪಿಸುತ್ತದೆ. ಮೈದಾನದಲ್ಲಿನ ಅವರ ಕೌಶಲ್ಯಗಳು ಅದ್ಭುತವಾಗಿವೆ. ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಯಶಸ್ಸು ಸಾಧಿಸಲು ಧೋನಿಯೇ ಪ್ರಮುಖ ಕಾರಣ" ಎಂದು ಶೇನ್ ವ್ಯಾಟ್ಸನ್ ಅನಿಸಿಕೆ ವ್ಯಕ್ತಪಡಿಸಿದ್ದಾರೆ.
2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರೂ ಸಹ ಎಂ.ಎಸ್.ಧೋನಿ ಎಂದಿನಂತೆಯೇ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಐಪಿಎಲ್ ಚುಟುಕು ಕ್ರಿಕೆಟ್ನಲ್ಲಿ ಧೋನಿ ಸ್ಟಂಪ್ ಹಿಂದೆ ತಮ್ಮ ಕರಾಮತ್ತು ಹಾಗೂ ಬ್ಯಾಟಿಂಗ್ ಅಬ್ಬರ ಮುಂದುವರೆಸಿದ್ದಾರೆ. 2008ರ ಮೊದಲ ಐಪಿಎಲ್ ಋತುವಿನಿಂದಲೂ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿರುವ ಧೋನಿ 2010, 2011, 2018, ಮತ್ತು 2021 ಸೇರಿ ತಂಡವನ್ನು ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಜೊತೆಗೆ 2016-17ರಲ್ಲಿ ಪುಣೆ ಸೂಪರ್‌ಜೈಂಟ್ ಪರ ಧೋನಿ ಆಡಿದ್ದರು. ಆಗ 2017ರಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ಸೂಪರ್‌ಜೈಂಟ್ ರನ್ನರ್ ಅಪ್ ಆಗಿತ್ತು. ಈಗಾಗಲೇ 2023ರ ಆವೃತ್ತಿಯ ಐಪಿಎಲ್ಗೆ ಧೋನಿ ಸಿದ್ಧತೆ ನಡೆಸಿದ್ದು, ಈ ಋತುವಿನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲಿದೆ.
ಇನ್ನು ದೋಹಾದಲ್ಲಿ ನಡೆಯುತ್ತಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಬಗ್ಗೆ ಪ್ರತಿಕ್ರಿಯಿಸಿರುವ ಶೇನ್ ವ್ಯಾಟ್ಸನ್, "ಜಾಕ್ ಕಾಲಿಸ್ ಮತ್ತು ಆರನ್ ಫಿಂಚ್ ಅವರಂತಹ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ಒಳ್ಳೆಯ ಅನುಭವ" ಎಂದಿದ್ದಾರೆ. "ಈಗಲೂ ಕಣಕ್ಕಿಳಿಯುತ್ತಿರುವುದು ಮತ್ತು ಕಾಲಿಸ್, ಆರನ್ ಫಿಂಚ್ ಸೇರಿದಂತೆ ಅನೇಕರೊಂದಿಗೆ ಡ್ರೆಸ್ಸಿಂಗ್ ರೂಮ್ನಲ್ಲಿ ಕಾಲ ಕಳೆಯುವುದು ನನಗೆ ಬಹಳ ಸಂತಸ ತಂದಿದೆ. ವಿಭಿನ್ನವಾಗಿರುವ ಕ್ರಿಕೆಟ್ ಲೀಗ್ ಇದಾಗಿದ್ದು, ಟೂರ್ನಿಯಲ್ಲಿ ಪಾಲ್ಗೊಂಡಿರುವುದು ತುಂಬಾ ಸಂತೋಷವಾಗಿದೆ" ಎಂದು ವ್ಯಾಟ್ಸನ್ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸತತ ಗೋಲ್ಡನ್ ಡಕ್ಗೆ Sky ಔಟ್: ನಾಯಕ ರೋಹಿತ್ ಶರ್ಮಾ ಹೇಳಿದ್ದೇನು?