ಪಾಟ್ನಾ: ಸಕಿಬುಲ್ ಗನಿ. 2022ರ ರಣಜಿ ಟ್ರೋಫಿಯಲ್ಲಿ ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಸಿಡಿಸಿ ಪ್ರಸಿದ್ಧಿ ಗಳಿಸಿದ ಯುವ ಪ್ರತಿಭೆ. ಮಿಜೋರಾಂ ವಿರುದ್ಧದ ಪಂದ್ಯದಲ್ಲಿ ಬಿಹಾರ ತಂಡದ ಪರ ಆಡಿದ್ದ ಈತ, 405 ಎಸೆತಗಳಲ್ಲಿ 56 ಬೌಂಡರಿ ಮತ್ತು 2 ಸಿಕ್ಸರ್‌ಸಹಿತ 341 ರನ್ ಸಿಡಿಸಿ ಕ್ರಿಕೆಟ್ ಜಗತ್ತನ್ನು ನಿಬ್ಬೆರಗುಗೊಳಿಸಿದ್ದರು.
ಗನಿ ಈ ವಿಶ್ವದಾಖಲೆಯ ಇನ್ನಿಂಗ್ಸ್ಗೂ ಮುನ್ನ 14 ಲಿಸ್ಟ್ ಎ ಪಂದ್ಯಗಳನ್ನಾಡಿದ್ದು, ಒಂದು ಶತಕ ಸೇರಿದಂತೆ 377 ರನ್ಗಳಿಸಿದ್ದರು. 11 ಟಿ20 ಪಂದ್ಯಗಳಿಂದ 192 ರನ್ ಸಿಡಿಸಿದ್ದರು. ಆದರೆ, ರಣಜಿಯ ಪದಾರ್ಪಣೆ ಪಂದ್ಯದಲ್ಲೇ ತ್ರಿಶತಕ ಬಾರಿಸಿದ ನಂತರ ಅವರ ಖ್ಯಾತಿ ವಿಶ್ವಕ್ಕೆ ಚಿರಪರಿಚಿತವಾಯಿತು.
ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ದಾಖಲೆ ಬರೆದಿರುವ ಈತ ಮಧ್ಯಮ ವರ್ಗದಿಂದ ಬಂದಿರುವ ಬಡ ಪ್ರತಿಭಾನ್ವಿತ ಕ್ರಿಕೆಟಿಗ. ಐಪಿಎಲ್ನಲ್ಲಿ ಆಡುವ ಕನಸು ಹೊಂದಿದ್ದು ಸಹೋದರ ಹಾಗೂ ಮೆಂಟರ್ ಆಗಿರುವ ಫೈಸಲ್ ಗನಿಯೊಂದಿಗೆ ಮೈದಾನದಲ್ಲಿ ಬೆವರು ಹರಿಸಲು ಶುರುಮಾಡಿದ್ದಾರೆ.
ಸಕಿಬುಲ್ ಗನಿ ಬಿಹಾರದ ಮೋತಿಹರಿ ಜಿಲ್ಲೆಯವರು. ರಣಜಿ ಕ್ರಿಕೆಟ್ನಲ್ಲಿ ಪದಾರ್ಪಣೆ ಮಾಡಿದ ಪಂದ್ಯದಲ್ಲಿ 341 ರನ್ಗಳ ರೆಕಾರ್ಡ್ ಬ್ರೇಕಿಂಗ್ ಇನ್ನಿಂಗ್ಸ್ ಸಿಡಿಸಿ ಪ್ರಸಿದ್ಧಿ ಪಡೆದರು. ಆದರೆ ಇವರ ಕ್ರಿಕೆಟ್ ಹಾದಿ ಅಷ್ಟು ಸುಲಭವಾಗಿರಲಿಲ್ಲ.
ಪ್ರಸ್ತುತ ದುಬಾರಿ ದುನಿಯಾದಲ್ಲಿ ಒಂದು ಉತ್ತಮ ಗುಣಮಟ್ಟದ ಕ್ರಿಕೆಟ್ ಬ್ಯಾಟ್ ಖರೀದಿಸಲು 30 ರಿಂದ 35 ಸಾವಿರ ರೂಪಾಯಿಗಳು ಬೇಕಾಗುತ್ತದೆ. ಆದರೆ ನಮ್ಮಂತಹ ಮಧ್ಯಮ ವರ್ಗದ ಕುಟುಂಬಕ್ಕೆ ಕ್ರಿಕೆಟ್ ಕಿಟ್ ಖರೀದಿ ಬಹಳ ಕಷ್ಟ. ಆದರೆ ನನ್ನ ಪೋಷಕರು ನನ್ನ ಕನಸಿನ ದಾರಿಗೆ ಹಣದ ಕೊರತೆ ಉಂಟಾಗಲು ಬಿಟ್ಟಿಲ್ಲ. ಹಣದ ಕೊರತೆ ಉಂಟಾದಾಗಲೆಲ್ಲಾ ನನ್ನ ತಾಯಿ ಯಾವುದೇ ಯೋಚನೆಯಿಲ್ಲದೆ ತನ್ನ ಆಭರಣಗಳನ್ನು ಅಡವಿಡುತ್ತಾರೆ ಎಂದು ಗನಿ ತಿಳಿಸಿದ್ದಾರೆ.
ಗನಿ ರಣಜಿ ತಂಡಕ್ಕೆ ಆಯ್ಕೆಯಾದ ನಂತರ ತಾಯಿ ಅಜ್ಮ ಖತೂನ್ ತಮ್ಮ ಚಿನ್ನದ ಸರ ಅಡವಿಟ್ಟು ಮಗನಿಗೆ ಮೂರು ಕ್ರಿಕೆಟ್ ಬ್ಯಾಟ್ ಕೊಡಿಸಿದ್ದಾರೆ. ನಂತರ ಪಂದ್ಯದ ಶುಲ್ಕದಿಂದ ಬಂದ ಹಣದಿಂದ ಗನಿ ತಾಯಿಯ ಚಿನ್ನದ ಸರ ಬಿಡಿಸಿಕೊಟ್ಟಿದ್ದಾರಂತೆ.
ಇನ್ನು ಗನಿಯ ಕ್ರಿಕೆಟ್ ಭವಿಷ್ಯಕ್ಕೆ ತಾಯಿಯಷ್ಟೇ ಅಲ್ಲ, ತಂದೆ ಮೊಹಮ್ಮದ್ ಮನ್ನನ್ ಗನಿ ಕೂಡ ಸಾಕಷ್ಟು ತ್ಯಾಗ ಮಾಡಿದ್ದಾರೆ. ಮೋತಿಹರಿಯಲ್ಲಿ ಸಣ್ಣ ಕ್ರೀಡಾ ಪರಿಕರಗಳ ಅಂಗಡಿ ನಡೆಸುವ ಅವರು, ಮಗನಿಗೆ ಕ್ರಿಕೆಟ್ ಉಪಕರಣಗಳು ಅಗತ್ಯ ಎನಿಸಿದಾಗಲೆಲ್ಲ ತಮ್ಮ ಜಮೀನಿನ ಪತ್ರಗಳನ್ನು ಹಲವಾರು ಬಾರಿ ಅಡವಿಟ್ಟಿದ್ದಾರಂತೆ. ಸಹೋದರ ಫೈಸಲ್, ತಮ್ಮನನ್ನು ಕ್ರಿಕೆಟಿಗನಾಗಿ ಮಾಡುವ ಉದ್ದೇಶಕ್ಕಾಗಿ ಸದಾ ಆತನ ಜೊತೆಯಲ್ಲೇ ಇದ್ದು, ಕ್ರಿಕೆಟ್ನ ತಂತ್ರಗಳನ್ನು ಕಲಿಸಿಕೊಡುತ್ತಿದ್ದಾರೆ. ಇದೇ ಕಾರಣಕ್ಕೆ ಗನಿ ತಮ್ಮೆಲ್ಲಾ ಯಶಸ್ಸನ್ನು ಅಣ್ಣನಿಗೆ ಅರ್ಪಿಸುತ್ತಾರೆ. "ಅಣ್ಣನ ನೆರವು ಇರುವುದರಿಂದಲೂ ಈಗಲೂ ನನಗೆ ದೊಡ್ಡ ಕ್ರಿಕೆಟ್ ಅಕಾಡೆಮಿಗೆ ಹೋಗಬೇಕೆಂಬ ಭಾವನೆ ಉಂಟಾಗಿಲ್ಲ. ನಾನು ನಮ್ಮ ಪೋಷಕರ ಆರು ಮಕ್ಕಳಲ್ಲಿ ಕಿರಿಯವನು. ಹಾಗಾಗಿ ನನ್ನನ್ನು ಪ್ರತಿಯೊಬ್ಬರೂ ಪ್ರೀತಿಸುತ್ತಾರೆ" ಎಂದು ಐಎಎನ್ಎಸ್ ಸುದ್ದಿಸಂಸ್ಥೆ ಪ್ರತಿನಿಧಿ ಮುಂದೆ ಭಾವುಕರಾಗಿ ಹೇಳಿಕೊಂಡಿದ್ದಾರೆ.
ಭಾರತ ಕಂಡಂತಹ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ರನ್ನು ಆರಾಧಿಸುವ ಸಕಿಬುಲ್ ಗನಿ, ಮುಂದಿನ ವರ್ಷದ ವೇಳೆಗೆ ಐಪಿಎಲ್ನಲ್ಲಿ ಆಡಬೇಕೆಂಬ ಮಹದಾಸೆ ಇರಿಸಿಕೊಂಡಿದ್ದಾರೆ.
ಇದನ್ನೂ ಓದಿ:ಜಡೇಜಾ ಅಲ್ಲ, ಧೋನಿ ನಂತರ ಈತ ಸಿಎಸ್ಕೆ ನಾಯಕನಾಗಬೇಕಿತ್ತು: ರವಿ ಶಾಸ್ತ್ರಿ