ಕೋಲ್ಕತ್ತಾ: ಟೀಂ ಇಂಡಿಯಾ ಲೆಜೆಂಡರಿ ಕ್ರಿಕೆಟರ್, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ಗೆ ಡೆಬ್ಯು ಮಾಡಿ 50 ವರ್ಷ ಮುಕ್ತಾಯಗೊಂಡಿವೆ. 50ನೇ ವಾರ್ಷಿಕೋತ್ಸವ ಸಂಭ್ರಮಾಚರಣೆ ಅಮೆರಿಕದಲ್ಲಿ ಆಚರಣೆ ಮಾಡಲು ನಿರ್ಧರಿಸಲಾಗಿದೆ. ಇದರಲ್ಲಿ ಗುಂಡಪ್ಪ ವಿಶ್ವನಾಥ್, ಕ್ಲೈವ್ ಲಾಯ್ಡ್ ಮತ್ತು ಕಪಿಲ್ ದೇವ್ ಭಾಗಿಯಾಗಲಿದ್ದಾರೆ.
1971ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಸುನಿಲ್ ಗವಾಸ್ಕರ್, ಚೊಚ್ಚಲ ಸರಣಿಯ 4 ಟೆಸ್ಟ್ ಪಂದ್ಯದಲ್ಲಿ ನಾಲ್ಕು ಸೆಂಚುರಿ ಸಿಡಿಸಿ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು. ಬಲಿಷ್ಠ ವೆಸ್ಟ್ಇಂಡೀಸ್ ವಿರುದ್ದದ ಡೆಬ್ಯೂ ಸರಣಿಯಲ್ಲಿ ಅಬ್ಬರಿಸಿದ ಗವಾಸ್ಕರ್, ಒಟ್ಟು ಟೆಸ್ಟ್ ಕ್ರಿಕೆಟ್‌ನಲ್ಲಿ 34 ಶತಕ ಸಿಡಿಸಿ ದಾಖಲೆ ಬರೆದಿದ್ದರು.
50 ವರ್ಷ ಪೂರೈಕೆ ಮಾಡಿರುವ ಸಂಭ್ರಮಾಚರಣೆ ಕಳೆದ ವರ್ಷ ಆಚರಣೆ ಮಾಡಬೇಕಾಗಿತ್ತು. ಆದರೆ, ಕೋವಿಡ್ನಿಂದಾಗಿ ಇದಕ್ಕೆ ತಡೆನೀಡಲಾಗಿತ್ತು. ಇದೀಗ ಜುಲೈ 30ರಂದು ಈ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಸಂಘಟಿಕರಾದ ಪ್ರಶಾಂತ್ ಕುಮಾರ್ ಗುಹಾ ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಅನೇಕ ನಟ - ನಟಿಯರು ಭಾಗಿಯಾಗುವ ಸಾಧ್ಯತೆ ಇದೆ. ಕಾರ್ಯಕ್ರಮಕ್ಕೆ 'ಟೆಸ್ಟ್ ಕ್ರಿಕೆಟ್ ಚೊಚ್ಚಲ 50ನೇ ವಾರ್ಷಿಕೋತ್ಸವ' ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ: ಕ್ರೀಡಾಭಿಮಾನಿ ಬೋಳು ತಲೆಗೆ ಅಪ್ಪಳಿಸಿದ RCB ಬ್ಯಾಟರ್ ಬಾರಿಸಿದ ಸಿಕ್ಸರ್..!
ಟೀಂ ಇಂಡಿಯಾ ಪರ 125 ಟೆಸ್ಟ್ ಪಂದ್ಯ ಆಡಿರುವ ಗವಾಸ್ಕರ್ 10,122ರನ್ ಸಿಡಿಸಿದ್ದಾರೆ. ಈ ಮೂಲಕ 10 ಸಾವಿರ ರನ್ ಗಡಿ ದಾಟಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಜೇಯ 236 ರನ್ಗಳಿಸಿದ್ದಾರೆ. 108 ಏಕದಿನ ಪಂದ್ಯಗಳಿಂದ ಗವಾಸ್ಕರ್ 3,092 ರನ್ ಗಳಿಸಿದ್ದಾರೆ. ಬ್ಯಾಟ್ಸ್‌ಮನ್ ಆಗಿ, ಟೀಂ ಇಂಡಿಯಾ ನಾಯಕನಾಗಿ ಭಾರತೀಯ ಕ್ರಿಕೆಟ್‌ನಲ್ಲಿ ಅದ್ವಿತೀಯ ಸಾಧನೆ ಮಾಡಿರುವ ಗವಾಸ್ಕರ್ಗೆ ಇದೀಗ ಯುಎಸ್ನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.