ಪಾಟ್ನಾ(ಬಿಹಾರ): ಬಾಂಗ್ಲಾದೇಶದ ವಿರುದ್ಧ ದ್ವಿಶತಕ ಸಿಡಿಸಿದ ಸಿಡಿಲಮರಿ ಇಶಾನ್ ಕಿಶನ್ ಸದ್ಯದ ಹಾಟ್ ಟಾಪಿಕ್ ಕ್ರಿಕೆಟರ್. ಟೆಸ್ಟ್ ನಡೆಯುತ್ತಿರುವ ಕಾರಣ ಇಶಾನ್ ಹುಟ್ಟೂರಾದ ಬಿಹಾರದಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಪಾಟ್ನಾದ ಅವರ ಪೂರ್ವಜನರ ಮನೆಯಲ್ಲಿ ದಿನ ಕಳೆಯುತ್ತಿರುವ ಡ್ಯಾಶಿಂಗ್ ಬ್ಯಾಟರ್ 'ಈಟಿವಿ ಭಾರತ್' ಜೊತೆ ಕ್ರಿಕೆಟ್ ಜೀವನದ ಬಗ್ಗೆ ಮಾತನಾಡಿದ್ದಾರೆ.
ಮೂರೂ ಮಾದರಿಯಲ್ಲೂ ಆಡುವಾಸೆ: ಐಪಿಎಲ್ ಹಾಗೂ ಟಿ20 ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಕರಾಮತ್ತು ತೋರಿಸಿರುವ ಇಶಾನ್ ಈಚೆಗೆ ಬಾಂಗ್ಲಾದೇಶದ ವಿರುದ್ಧದ ಏಕದಿನದಲ್ಲಿ ದಾಖಲೆಯ ದ್ವಿಶತಕ ಬಾರಿಸಿ ಕ್ರಿಕೆಟ್ ಪಂಡಿತರ ಕಣ್ಣರಳಿಸಿದ್ದರು. ಆಕ್ರಮಣಕಾರಿ ಬ್ಯಾಟಿಂಗ್ನಿಂದಾಗಿ ಹೆಸರಾದ ಏಕದಿನ, ಟಿ20 ಮತ್ತು ಟೆಸ್ಟ್ನಲ್ಲೂ ಭಾರತ ತಂಡವನ್ನು ಪ್ರತಿನಿಧಿಸುವ ಆಸೆ ಹೊಂದಿದ್ದಾರೆ. ಮೂರೂ ಸ್ವರೂಪಗಳಲ್ಲಿ ತನ್ನ ಸಾಮರ್ಥ್ಯ ಸಾಬೀತು ಮಾಡುವ ಉತ್ಕಟ ಇಚ್ಚೆ ಹೊಂದಿದ್ದಾರೆ.
ಬಾಂಗ್ಲಾ ವಿರುದ್ಧದ ದ್ವಿಶತಕದಿಂದ ವೃತ್ತಿ ಜೀವನದಲ್ಲಿ ಬಹಳಷ್ಟು ಬದಲಾವಣೆಯಾಗಿದೆ. ಮುಂದೆ ಭಾರತ ತಂಡದಲ್ಲಿ ಕಾಯಂ ಸ್ಥಾನ ಪಡೆಯುವುದು ನನ್ನ ಗುರಿಯಾಗಿದೆ. ಒಂದು ಇನಿಂಗ್ಸ್ ನನ್ನ ಮೇಲೆ ಹೆಚ್ಚಿನ ಹೊಣೆ ನೀಡಿದೆ. ಇದರಿಂದಲೇ ಬಿಹಾರ ಮತ್ತು ಜಾರ್ಖಂಡ್ ಕ್ರಿಕೆಟ್ನಲ್ಲಿ ಗುರುತಿಸಿಕೊಂಡಿದ್ದೇನೆ ಎಂದು ಇಶಾನ್ ಕಿಶನ್ ಹೇಳಿದರು.
ಫಿಟ್ನೆಸ್ನಲ್ಲಿ ವಿರಾಟ್, ಪಾಂಡ್ಯಾ ಬೆಸ್ಟ್: ಕ್ರಿಕೆಟ್ನಲ್ಲಿ ನಾವು ಮುಂದುವರಿಯಬೇಕಾದರೆ ದೈಹಿಕ ಸಾಮರ್ಥ್ಯ ಅತ್ಯಗತ್ಯ. ನಿರಂತರ ಕ್ರೀಡೆಯಿಂದಾಗಿ ದೇಹವನ್ನು ಹುರಿಗೊಳಿಸಬೇಕು. ಫಿಟ್ನೆಸ್ ವಿಷಯದಲ್ಲಿ ಬ್ಯಾಟಿಂಗ್ ಕಿಂಗ್ ವಿರಾಟ್ ಕೊಹ್ಲಿ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾಗೆ ಸಮರಿಲ್ಲ. ಅವರಂತೆ ಫಿಟ್ನೆಸ್ ಕಾಯ್ದುಕೊಳ್ಳಬೇಕು. ಇದದಿಂದಲೇ ಅವರು ದೇಶಕ್ಕಾಗಿ ದೀರ್ಘಕಾಲದಿಂದ ಕ್ರಿಕೆಟ್ ಆಡುತ್ತಿದ್ದಾರೆ ಎಂದರು.
ಹಿರಿಯರ ಸಲಹೆ ಬೇಕೇ ಬೇಕು: ಕ್ರಿಕೆಟ್ನಲ್ಲಿ ಹಲವಾರು ಯುವ ಪ್ರತಿಭೆಗಳಿವೆ. ಆದರೆ, ಅವರಿಗೆ ಅವಕಾಶ ಮತ್ತು ಮಾರ್ಗದರ್ಶನ ಇಲ್ಲವಾಗಿದೆ. ಹಿರಿಯರ ಸಲಹೆ ಮತ್ತು ಬೆಂಬಲ ನಮ್ಮಂತವರಿಗೆ ಬೇಕಿದೆ. ಈ ವಿಚಾರದಲ್ಲಿ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಮುಂದಿದ್ದಾರೆ. ಅವರ ಅನುಭವ ಯುವ ಕ್ರಿಕೆಟಿಗರಿಗೆ ಪ್ರೇರಣೆ. ಅಂಥವರಿಂದ ಕಲಿಯುವುದು ತುಂಬಾ ಇದೆ. ಅವರು ತಂಡದಲ್ಲಿರುವುದೇ ನಮಗೆ ಬಲ. ಅವಲ ಸಲಹೆಗಳು ಮೈದಾನದಲ್ಲಿ ಭಾರೀ ಪರಿಣಾಮ ಬೀರುತ್ತವೆ ಎಂದರು ಮೆಚ್ಚುಗೆ ನೀಡಿದರು.
ಖದರ್ ಬದಲಿಸಿದ ಬಿರುಗಾಳಿ ಇನ್ನಿಂಗ್ಸ್: ಬಾಂಗ್ಲಾದೇಶ ವಿರುದ್ಧದ ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಎಡಗೈ ದಾಂಡಿಗ ಇಶಾನ್ ಕಿಶನ್ ದಾಖಲೆಯ ದ್ವಿಶತಕ ಬಾರಿಸಿದ್ದು, ಮನೆ ಮಾತಾಯಿತು. ಇಶಾನ್ 131 ಎಸೆತಗಳಲ್ಲಿ 210 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು. ದ್ವಿಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಅಲ್ಲದೇ, ವೇಗದಲ್ಲಿ ವೆಸ್ಟ್ಇಂಡೀಸ್ ದೈತ್ಯ ಕ್ರಿಸ್ ಗೇಲ್ ಅವರ ದಾಖಲೆಯನ್ನು ಪುಡಿಗಟ್ಟಿದ್ದಾರೆ ಎಂಬುದು ವಿಶೇಷ.
ಓದಿ: ಐಪಿಎಲ್ ಹರಾಜಿನಲ್ಲಿ ಅನ್‌ಕ್ಯಾಪ್ಡ್ ಆಟಗಾರರಿಗೆ ಜಾಕ್‌ಪಾಟ್!: ಜಮ್ಮುವಿನ ಶರ್ಮಾಗೆ ₹2.6 ಕೋಟಿ