ಹೈದರಾಬಾದ್: ಭಾರತ ತಂಡ ಅತ್ಯುತ್ತಮ ವೇಗದ ಬೌಲಿಂಗ್ ಸಂಯೋಜನೆ ಹೊಂದಿದೆ. ಆದರೆ, ಬೇರೆ ದೇಶಗಳ ಬೌಲರ್ಗಳ ಜೊತೆ ಹೋಲಿಕೆ ಮಾಡುವುದು ನ್ಯಾಯೋಚಿತವಲ್ಲ ಎಂದು ಮಾಜಿ ಕ್ರಿಕೆಟರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಅಭಿಪ್ರಾಯಪಟ್ಟಿದ್ದಾರೆ.
ವರ್ಚುಯಲ್ ಮಾಧ್ಯಮಗೋಷ್ಠಿಯಲ್ಲಿ ಈಟಿವಿ ಭಾರತ, ಪ್ರಸ್ತುತ ಇರುವ ಭಾರತ ತಂಡ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ ಎಂದು ಕೇಳಿದ್ದಕ್ಕೆ, ವೈವಿಧ್ಯಮಯ ಸ್ಪಿನ್ನರ್‌ಗಳು, ಸ್ವಿಂಗ್ ಬೌಲರ್‌ಗಳು ಮತ್ತು ವೇಗದ ಬೌಲರ್‌ಗಳನ್ನು ಹೊಂದಿರುವ ಕೊಹ್ಲಿ ಪಡೆಯ ಬೌಲಿಂಗ್ ಗುಂಪು, ಹಿಂದಿನ ಭಾರತ ತಂಡದ ಬೌಲಿಂಗ್ ಸಂಯೋಜನೆಗಿಂತ ಹೇಗೆ ಭಿನ್ನ ಮತ್ತು ಉತ್ತಮ ಎಂಬುವುದನ್ನು ಮಾಜಿ ಲೆಗ್ ಸ್ಪಿನ್ನರ್ ಲಕ್ಷ್ಮಣ್ ತಮ್ಮದೇ ಆದ ರೀತಿಯಲ್ಲಿ ವಿವರಿಸಿದ್ದಾರೆ.
ಈ ದಾಳಿಯನ್ನು ಯಾವುದೇ ಬೌಲಿಂಗ್ ಸಂಯೋಜನೆಯೊಂದಿಗೆ ಹೋಲಿಕೆ ಮಾಡಿದರೆ ಅದು ನ್ಯಾಯ ಸಮ್ಮತ ಎನಿಸುವುದಿಲ್ಲ. ಏಕೆಂದರೆ ಈ ಘಟಕದಲ್ಲಿ ಇರುವ ಎಲ್ಲ ಬೌಲರ್ಗಳೂ ವೇಗಿಗಳೇ. ಕೇವಲ ಒಬ್ಬ ಎಡಗೈ ಸ್ಪಿನ್ನರ್ ಇದ್ದಾರೆ. ಅತ್ಯುತ್ತಮ ಬೌಲಿಂಗ್ ದಾಳಿ ವಿಭಿನ್ನತೆಯಿಂದ ಕೂಡಿರುತ್ತದೆ. ಅದರಲ್ಲಿ ಸ್ಥಿರತೆಯುಳ್ಳ ವೇಗಿಗಳು, ಸ್ಪಿನ್ನರ್ಸ್ , ಸ್ವಿಂಗ್ ಬೌಲರ್ ಇರುತ್ತಾರೆ. ಈ ಬೌಲರ್ಗಳಲ್ಲಿ ಸಾಕಷ್ಟು ವೈವಿಧ್ಯಮಯ ಇರುತ್ತದೆ.
ಎಡಗೈ ಸ್ಪಿನ್ನರ್, ಲೆಗ್ ಸ್ಪಿನ್ನರ್ ಮತ್ತು ಆಫ್ ಸ್ಪಿನ್ನರ್‌ಗಳು ಇರುತ್ತಾರೆ. ನೀವು ಈ ವೈವಿಧ್ಯಮಯ ಬೌಲರ್‌ಗಳನ್ನು ಹೊಂದಿದ್ದರೆ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಾಡಬಹುದು. ಅಲ್ಲದೇ ನೀವು ಬೇರೆ ಬೇರೆ ಬ್ಯಾಟ್ಸ್ಮನ್ಗಳಿಗೆ ಬೇರೆ ಬೇರೆ ಬೌಲರ್‌ಗಳನ್ನು ಬಳಸಿಕೊಳ್ಳಬಹುದಾಗಿದೆ ಎಂದು ಶಿವರಾಮಕೃಷ್ಣನ್ ತಿಳಿಸಿದ್ದಾರೆ.
ಈಗಿರುವ ಬೌಲಿಂಗ್ ಪಡೆ ಉತ್ತಮವಾಗಿದೆ:
ಒಂದು ವೇಳೆ ನೀವು ಈಗಿರುವ ಭಾರತದ ವೇಗದ ಬೌಲಿಂಗ್ ಘಟಕ ಅತ್ಯುತ್ತಮವೇ ಎಂದು ಕೇಳಿದರೆ, ಖಂಡಿತವಾಗಿ ಹೌದು ಎಂದು ಹೇಳಬೇಕಾಗುತ್ತದೆ. ತಂಡದಲ್ಲಿರುವ ನಾಲ್ವರು ಬೌಲರ್‌ಗಳು ಒಟ್ಟಿಗೆ ಬೌಲಿಂಗ್ ಮಾಡಿದರೆ, ಅದನ್ನು ಖಂಡಿತವಾಗಿಯೂ ಹೌದು ಎಂದು ಒಪ್ಪಿಕೊಳ್ಳಬಹುದು. ಆದರೆ, ಅತ್ಯುತ್ತಮ ಬೌಲಿಂಗ್ ಸಂಯೋಜನೆಯಲ್ಲಿ ಯಾವಾಗಲೂ ವೈವಿಧ್ಯಮಯ ದಾಳಿ ಇರಬೇಕು ಎಂದು ಅವರು ಈಟಿವಿ ಭಾರತಕ್ಕೆ ಹೇಳಿದ್ದಾರೆ.
ಇನ್ನು ಮೂರನೇ ಪಂದ್ಯದಲ್ಲೂ ಇದೇ ಬೌಲಿಂಗ್ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕೆ ಅಥವಾ ಇಂಗ್ಲೆಂಡ್ ವಾತಾವರಣಕ್ಕೆ ತಕ್ಕಂತೆ ಹೇಗಬೇಕೆ ಎಂದು ಕೇಳಿದ್ದಕ್ಕೆ ಟೀಮ್ ಮ್ಯಾನೇಜ್ಮೆಂಟ್ ಮತ್ತು ನಾಯಕ ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಕಳೆದೆರಡು ಪಂದ್ಯಗಳನ್ನು ನೋಡಿದರೆ ಯಾವ ಬೌಲರ್‌ಗಳನ್ನು ತಂಡದಿಂದ ಕೈಬಿಡುವುದು ಕಠಿಣದ ಕೆಲಸ ಎಂದಿದ್ದಾರೆ.
ಸಿರಾಜ್ ಕೈ ಬಿಡುವುದು ಸುಲಭವಲ್ಲ
ನೀವು ಮೊಹಮ್ಮದ್ ಸಿರಾಜ್ ಅಂತಹ ಬೌಲರ್ನನ್ನು ತಂಡದಿಂದ ಕೈಬಿಡಲು ಸಾಧ್ಯವಿಲ್ಲ. ಏಕೆಂದರೆ ಆತ ಖಂಡಿತ ಪ್ರತಿಭಾವಂತ. ಇಂಗ್ಲೆಂಡ್ನಲ್ಲಿ ಸರಿಯಾದ ಲೆಂತ್ನಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ, 2ನೇ ಟೆಸ್ಟ್ನಲ್ಲಿ ನನ್ನ ಪ್ರಕಾರ ಅಶ್ವಿನ್, ಇಶಾಂತ್ ಶರ್ಮಾ ಬದಲಿಗೆ ಆಡಬೇಕಿತ್ತು.
ಆದರೆ, ಅನುಭವದ ಆಧಾರದ ಮೇಲೆ ಇಶಾಂತ್ ತಂಡದಲ್ಲಿ ಉಳಿದುಕೊಂಡರು ಮತ್ತು ಎರಡೂ ಇನ್ನಿಂಗ್ಸ್ಗಳಲ್ಲೂ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದರು. ಹಾಗಾಗಿ ಮುಂದಿನ ಪಂದ್ಯದಲ್ಲೂ ನಾಲ್ಕು ವೇಗದ ಬೌಲರ್ಗಳೊಂದಿಗೆ ಆಡಲು ವಿರಾಟ್ ಕೊಹ್ಲಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಬಹುದು ಎಂದು ನಾನು ಭಾವಿಸುತ್ತೇನೆ ಎಂದು ಶಿವರಾಮ ಕೃಷ್ಣನ್ ತಿಳಿಸಿದ್ದಾರೆ.
ಇದನ್ನು ಓದಿ: ಟೆಸ್ಟ್ ಸರಣಿ ಮಧ್ಯೆಯೂ ಟಿ -20 ವಿಶ್ವಕಪ್ಗೆ ತಂಡ ಕಟ್ಟಲು ಮುಂದಾದ ಕೊಹ್ಲಿ, ಬಿಸಿಸಿಐ ಆಫೀಸರ್ಸ್