ದುಬೈ: ಇಂಗ್ಲೆಂಡ್ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಜಿದ್ದಾಜಿದ್ದಿಯ ಫೈನಲ್ ಪಂದ್ಯದ ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಅನ್ನೋದಕ್ಕೆ ಆಸ್ಟ್ರೇಲಿಯಾದ ಮಾಜಿ ವೇಗಿ ಬ್ರೆಟ್ ಲೀ ಭವಿಷ್ಯ ನುಡಿದಿದ್ದಾರೆ.
ಇದೇ ಜೂನ್ 18ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಕಾಳಗ ನಡೆಯಲಿದ್ದು, ಆಸ್ಟ್ರೇಲಿಯಾದ ಬೌಲಿಂಗ್ ದಂತಕಥೆ ಬ್ರೆಟ್ ಲೀ ಸರಣಿ ಆರಂಭಕ್ಕೂ ಮುನ್ನವೇ ಇದೇ ತಂಡ ಗೆಲ್ಲಬಹುದೆಂದು ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಇದೇ ವೇಳೆ, ವಿರಾಟ್ ಕೊಹ್ಲಿ ಹಾಗೂ ಕೇನ್ ವಿಲಿಯಮ್ಸನ್ ಅವರ ನಡುವಿನ ವಿಭಿನ್ನ ನಾಯಕತ್ವದ ಗುಣಗಳನ್ನು ಕೊಂಡಾಡಿರುವ ಬ್ರೆಟ್ ಲೀ, ತಂಡದ ಅರ್ಧ ಭಾಗದಷ್ಟು ಗೆಲುವು ನ್ಯೂಜಿಲ್ಯಾಂಡ್ಗೆ ಇದೆ ಎಂದಿದ್ದಾರೆ. ಕೊಹ್ಲಿ ನೇತೃತ್ವದ ಭಾರತ ತಂಡ ಆಕ್ರಮಣಕಾರಿ ಆಟ ಆಡಿದಷ್ಟು ಎದುರಾಳಿ ವಿಲಿಯಮ್ಸನ್ ಬಳಗವೂ ಸಹ ಅಷ್ಟೇ ಲಯ ಉಳಿಸಿಕೊಳ್ಳಲಿದೆ.
ಬೌಲಿಂಗ್ ವಿಚಾರಕ್ಕೆ ಬಂದಾಗ ಎರಡೂ ತಂಡಗಳ ನುಡುವೆ ಸಾಕಷ್ಟು ವ್ಯತ್ಯಾಸ ಇರುವುದನ್ನು ನಾವು ಗಮನಿಸಬಹುದು. ಸರಣಿಯಲ್ಲಿ ವಿಲಿಯಮ್ಸನ್ ಬಳಗ ಟೀಂ ಇಂಡಿಯಾದ ಮೇಲೆ ಸವಾರಿ ಮಾಡಬಲ್ಲ ಸಾಮರ್ಥ್ಯವನ್ನಿಟ್ಟುಕೊಂಡಿದೆ. ಇತ್ತೀಚೆಗೆ ಕೇನ್ ಅವರೊಂದಿಗೆ ಸ್ವಲ್ಪ ಸಮಯ ಕಳೆದಿದ್ದರಿಂದ ತಂಡದ ಸಾಮರ್ಥ್ಯವನ್ನು ಸಮೀಪದಿಂದ ಗಮನಿಸಿರುವೆ. ಹಾಗಾಗಿ ಭಾಗಶಃ ಗೆಲವು ನ್ಯೂಜಿಲ್ಯಾಂಡ್ ಪಾಲಾಗಬಹುದು ಎಂದಿದ್ದಾರೆ.
ಇದರ ನಡುವೆ ನಾಯಕ ಕೊಹ್ಲಿ ಅವರ ಆಕ್ರಮಣಕಾರಿ ಆಟ ನಮ್ಮ ಅನಿಸಿಕೆಯನ್ನು ಸುಳ್ಳು ಸಹ ಮಾಡಬಹುದು. ಹಾಗಾಗಿ ಬಲಿಷ್ಠ ತಂಡಗಳ ನಡುವೆ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಯಾರ ಕೈವಶವಾಗಲಿದೆ ಅನ್ನೋದನ್ನು ನಾನು ಸಹ ಕಾತರತೆಯಿಂದ ಕಾಯುತ್ತಿದ್ದೇನೆ ಎಂದು ಲೀ ಹೇಳಿದ್ದಾರೆ.