ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯಬೇಕಿದ್ದ ಟೆಸ್ಟ್ ಸರಣಿಯ ಕೊನೆಯ ಹಾಗೂ 5ನೇ ಪಂದ್ಯ ರದ್ದುಪಡಿಸಿರುವ ಬಗ್ಗೆ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಫರೋಖ್ ಎಂಜಿನಿಯರ್ ಬೇಸರ ವ್ಯಕ್ತಪಡಿಸಿದ್ದಾರೆ.
ಮ್ಯಾಂಚೆಸ್ಟರ್‌ನಿಂದ ದೂರವಾಣಿ ಮೂಲಕ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿರುವ ಅವರು, ಇದು ಕೆಟ್ಟ ಹಾಗೂ ನಿರಾಶಾದಾಯಕ ನಿರ್ಧಾರ. ಹಾಗಾಗಿ ಬಿಸಿಸಿಐ ಮತ್ತು ಇಸಿಬಿ ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.
ಉಭಯ ದೇಶಗಳ ನಡುವಿನ ಪಂದ್ಯಗಳನ್ನು ನೋಡಲು ಸಾವಿರಾರು ಕ್ರಿಕೆಟ್ ಅಭಿಮಾನಿಗಳು ದುಬೈ, ಲಂಡನ್ ಮತ್ತು ಭಾರತದಿಂದ ಪ್ರಯಾಣ ಬೆಳೆಸಿದ್ದರು. ತಮಗೆ ಉಳಿದುಕೊಳ್ಳಲು ಬೇಕಿರುವ ಹೋಟೆಲ್ ಸೇರಿ ಹತ್ತಾರು ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಇಷ್ಟು ಸಾಲದೆಂಬಂತೆ ರಜಾ ದಿನಗಳನ್ನೂ ಸಹ ಹೊಂದಿಸಿಕೊಂಡಿದ್ದರು. ಆದ್ರೆ ಪಂದ್ಯ ರದ್ದಾದ ಕಾರಣಕ್ಕೆ ಮೂಲೆ ಮೂಲೆಯಿಂದ ಬಂದ ಕ್ರೀಡಾಸಕ್ತರಿಗೆ ನಿರಾಶೆಯಾಗಿದೆ.
ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಭವಿಷ್ಯದಲ್ಲಿ ಯಾವತ್ತಾದರೂ ಕ್ರಿಕೆಟ್ ಸರಣಿ ಏರ್ಪಟ್ಟರೆ ನಾವು ಖಂಡಿತವಾಗಿಯೂ ನೋಡಲು ಬರುವುದಿಲ್ಲ ಎಂದು ಸಾಕಷ್ಟು ಜನರು ನನಗೆ ತಿಳಿಸಿದ್ದಾರೆ. ಹಾಗಾಗಿ ಬಿಸಿಸಿಐ ಮತ್ತು ಇಸಿಬಿ ಮಾತುಕತೆ ನಡೆಸಿ ಕ್ರಿಕೆಟ್ ಅಭಿಮಾನಿಗಳ ನಿರಾಸೆ ಹೋಗಲಾಡಿಸಬೇಕು ಎಂದು ಮನವಿ ಮಾಡಿದ್ದಾರೆ.
ಭಾರತದ ಆಟಗಾರರ ಕೋವಿಡ್ ಆತಂಕ ಅರ್ಥವಾಗುತ್ತದೆ. ಆದರೆ, ವಿಶ್ವದಾದ್ಯಂತ ಕೋವಿಡ್ ಹಿನ್ನೆಲೆಯಲ್ಲಿ ಕೆಲ ತಂಡಗಳು ಸರಣಿಯನ್ನು ಬೇರೆಡೆ ನಡೆಸುತ್ತಿವೆ. ಬಿಸಿಸಿಐ ಮತ್ತು ಇಸಿಬಿ ಕೂಡ ಮಾತುಕತೆ ನಡೆಸಿ ಈ ನಿರಾಸೆಯನ್ನು ಹೋಗಲಾಡಿಸಬೇಕು ಎಂದರು.
ಭಾರತ ತಂಡ ಈ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲು ಐಪಿಎಲ್ ಕಾರಣ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಊಹಾಪೋಹವನ್ನು ಅವರು ಇದೇ ವೇಳೆ ತಿರಸ್ಕರಿಸಿದರು.