ಲಂಡನ್: ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 16 ರನ್ಗಳಿಂದ ಮಣಿಸಿದ ಭಾರತದ ವನಿತೆಯರು 3-0 ವೈಟ್ವಾಶ್ನೊಂದಿಗೆ ಸರಣಿ ಜಯಿಸಿದ್ದಾರೆ. ಈ ಪಂದ್ಯದೊಂದಿಗೆ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ ವೇಗದ ಬೌಲರ್ ಜೂಲನ್ ಗೋಸ್ವಾಮಿ ಅವರಿಗೆ ಮಹಿಳಾ ಕ್ರಿಕೆಟ್ ತಂಡ ಕ್ಲೀನ್ ಸ್ವೀಪ್ ವಿಜಯದ ಉಡುಗೊರೆ ನೀಡಿತು.
ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ ವನಿತೆಯರು ಈ ಸಾಧನೆ ಮಾಡಿರುವುದು ಗಮನಾರ್ಹವಾಗಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತವು 169 ರನ್‌ಗಳಿಗೆ ಆಲೌಟ್ ಆಗಿತ್ತು. ಈ ಅಲ್ಪ ಮೊತ್ತದ ನಡುವೆಯೂ ಕೂಡ ಜೂಲನ್ ಸೇರಿದಂತೆ ಎಲ್ಲ ಬೌಲರ್ಗಳು ಅದ್ಭುತ ಪ್ರದರ್ಶನ ತೋರಿ ತಂಡಕ್ಕೆ ಗೆಲುವು ತಂದಿತ್ತರು.
170 ರನ್ಗಳ ಗೆಲುವಿನ ಗುರಿ ಬೆನ್ನಟ್ಟಿದ ಆಂಗ್ಲರು ಆರಂಭದಿಂದಲೂ ವಿಕೆಟ್ ಕಳೆದುಕೊಳ್ಳುತ್ತ ಒತ್ತಡಕ್ಕೆ ಸಿಲುಕಿದರು. ಆರಂಭಿಕರಾದ ಎಮ್ಮಾ ಲಂಬ್ 21 ರನ್ ಗಳಿಸಿದರೆ, ಇನ್ನುಳಿದಂತೆ ಟಮ್ಮಿ ಬ್ಯೂಮಾಂಟ್ 8, ಸೋಫಿಯಾ ಡಂಕ್ಲಿ 7, ಅಲಿಸ್ ಕಾಪ್ಸಿ 5 ಹಾಗೂ ಡೇನಿಯಲ್ ವ್ಯಾಟ್ 8 ರನ್‌ಗಳಿಗೆ ಪೆವಿಲಿಯನ್ ಸೇರಿದ್ದರು. ಒಂದು ಹಂತದಲ್ಲಿ 65 ರನ್ಗೆ ಇಂಗ್ಲೆಂಡ್ನ 7 ವಿಕೆಟ್ ಉರುಳಿದ್ದವು.
ಅದಾದ ಬಳಿಕ ಚಾರ್ಲೊಟ್ಟೆ ಡೀನ್(47) ಬಾಲಂಗೋಚಿಗಳೊಂದಿಗೆ ದಿಟ್ಟ ಹೋರಾಟದ ಮೂಲಕ ಆಂಗ್ಲರಿಗೆ ಗೆಲುವಿನ ಭರವಸೆ ಮೂಡಿಸಿದರು. ಆದರೆ 47 ರನ್ ಬಾರಿಸಿದ ಅವರು ಗೆಲುವಿಗೆ ಇನ್ನೂ 16 ರನ್ ಬೇಕಿದ್ದಾಗ ರನೌಟ್ ಆಗುವ ಮೂಲಕ ಇಂಗ್ಲೆಂಡ್ ತಂಡ ಸೋಲುಂಡಿತು. ಭಾರತದ ಪರ ಜೂಲನ್ ಗೊಸ್ವಾಮಿ 30ಕ್ಕೆ 2, ರೇಣುಕಾ ಸಿಂಗ್ 29ಕ್ಕೆ 4 ಹಾಗೂ ರಾಜೇಶ್ವರಿ ಗಾಯಕ್ವಾಡ್ 38ಕ್ಕೆ 2 ವಿಕೆಟ್ ಕಬಳಿಸಿದರು.
ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತದ ವನಿತೆಯರ ತಂಡವು ಸ್ಮೃತಿ ಮಂಧಾನಾ (50), ದೀಪ್ತಿ ಶರ್ಮಾ (68) ಅವರ ಅರ್ಧಶತಕ ಹಾಗೂ ಪೂಜಾ ವಸ್ತ್ರೇಕರ್ ಅವರ 22 ರನ್ಗಳ ನೆರವಿನಿಂದ 169 ರನ್ ಬಾರಿಸಿತ್ತು. ಇವರನ್ನು ಹೊರತುಪಡಿಸಿ ಉಳಿದವರು ಯಾರೂ ಸಹ ಎರಡಂಕಿ ಮೊತ್ತ ತಲುಪಲಿಲ್ಲ.
ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್ ಜಯ, ಎರಡನೇ ಪಂದ್ಯದಲ್ಲಿ 88 ರನ್ ಹಾಗೂ ಅಂತಿಮ ಪಂದ್ಯದಲ್ಲಿ 16 ರನ್ಗಳಿಂದ ಇಂಗ್ಲೆಂಡ್ಗೆ ಸೋಲುಣಿಸಿದ ಹರ್ಮನ್ ಪ್ರೀತ್ಕೌರ್ ಪಡೆ ಇಂಗ್ಲೆಂಡ್ ನೆಲದಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಸಾಧನೆಗೈದಿದೆ.
ಇದನ್ನೂ ಓದಿ: ಜೂಲನ್ ಗೋಸ್ವಾಮಿಗೆ ಇಂಗ್ಲೆಂಡ್ನಿಂದ ಗಾರ್ಡ್ ಆಫ್ ಹಾನರ್.. ಮೈದಾನದಲ್ಲೇ ಕಣ್ಣೀರಿಟ್ಟ ಭಾರತ ವನಿತೆಯರು