ಹೈದರಾಬಾದ್: ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ 'ದಿ ವಾಲ್' ಖ್ಯಾತಿಯ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕಗೊಂಡಿದ್ದಾರೆ. ಬರುವ ದಿನಗಳಲ್ಲೂ ಭಾರತ ತಂಡಕ್ಕೆ ಅವರು ಸಂಪೂರ್ಣ ಅವಧಿಗೆ ಕೋಚ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರಲು ಶುರುವಾಗಿದ್ದು, ಈ ಕುರಿತಾಗಿ ವಾಸೀಂ ಜಾಫರ್ ತಮ್ಮ ಅನಿಸಿಕೆ ಹೇಳಿದ್ದಾರೆ.
2021ರ ಟಿ20 ವಿಶ್ವಕಪ್ ಮುಕ್ತಾಯವಾಗುತ್ತಿದ್ದಂತೆ ಕೋಚ್ ರವಿಶಾಸ್ತ್ರಿ ಜೊತೆಗಿನ ಒಪ್ಪಂದ ಕೊನೆಗೊಳ್ಳಲಿದೆ. ಇದಾದ ಬಳಿಕ ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಸಂಪೂರ್ಣ ಅವಧಿಗೆ ಕೋಚ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಟೀಂ ಇಂಡಿಯಾ ಮಾಜಿ ಬ್ಯಾಟ್ಸ್‌ಮನ್ ವಾಸೀಂ ಜಾಫರ್ ಪ್ರಕಾರ, ದ್ರಾವಿಡ್ ಟೀಂ ಇಂಡಿಯಾ ಕೋಚ್ ಆಗಬಾರದು ಎಂದಿದ್ದಾರೆ.
ದ್ರಾವಿಡ್ಗೆ ಟೀಂ ಇಂಡಿಯಾದ ಸಂಪೂರ್ಣ ಅವಧಿಗೆ ಕೋಚ್ ಹುದ್ದೆ ನೀಡಬಾರದು ಎಂದಿರುವ ಜಾಫರ್, ಅದಕ್ಕೆ ಕಾರಣ ನೀಡಿದ್ದಾರೆ. ರಾಹುಲ್ ದ್ರಾವಿಡ್ ಅಂಡರ್-19, ಇಂಡಿಯಾ ಎ ತಂಡದೊಂದಿಗೆ ಎನ್ಸಿಎನಲ್ಲಿ ಕೆಲಸ ಮಾಡಿ ಅವರನ್ನು ಒಳ್ಳೆಯ ಆಟಗಾರರನ್ನಾಗಿ ರೂಪಿಸಬೇಕು. ಈ ಮೂಲಕ ಟೀಂ ಇಂಡಿಯಾಗೆ ಆಯ್ಕೆಯಾಗುವ ಪ್ಲೇಯರ್ಸ್ ಬಹುತೇಕವಾಗಿ ಪರಿಪೂರ್ಣರಾಗಿರುತ್ತಾರೆ ಎಂದಿದ್ದಾರೆ.
ಇದನ್ನೂ ಓದಿರಿ: IND v/s SL ಸರಣಿ ಮೇಲೆ ಕೋವಿಡ್ ಕರಿನೆರಳು : ಲಂಕಾ ಬ್ಯಾಟಿಂಗ್ ಕೋಚ್ಗೆ COVID-19 ದೃಢ
ಯುವ ಆಟಗಾರರು ಹಾಗೂ ಎನ್ಸಿಎಗೆ ಬರುವ ಆಟಗಾರರಿಗೆ ರಾಹುಲ್ ದ್ರಾವಿಡ್ ಅವಶ್ಯಕತೆ ಬಹುಮುಖ್ಯವಾಗಿದೆ. ಇದೀಗ ಟೀಂ ಇಂಡಿಯಾ ಇಷ್ಟೊಂದು ಬಲಿಷ್ಠವಾಗಿ ರೂಪುಗೊಳಲು ಅವರ ಕಾರ್ಯ ಮಹತ್ವದ್ದು ಎಂದು ಹೇಳಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾದ ಕೋಚ್ ಆಗಿ ರಾಹುಲ್ ದ್ರಾವಿಡ್ ಆಯ್ಕೆಯಾಗಿದ್ದು, ಇದೀಗ ಶಿಖರ್ ಧವನ್ ನೇತೃತ್ವದ ಟೀಂ ಇಂಡಿಯಾ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ ಭಾಗಿಯಾಗಲಿದೆ.