ಚೆನ್ನೈ: ಕ್ರಿಕೆಟ್ ಲೆಜೆಂಡ್ ಮಹೀಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಅವರ ನಿರ್ಮಾಣ ಸಂಸ್ಥೆ ಧೋನಿ ಎಂಟರ್‌ಟೈನ್‌ಮೆಂಟ್ ಮುಖ್ಯವಾಹಿನಿಯ ಚಲನಚಿತ್ರ ನಿರ್ಮಾಣ ಕ್ಷೇತ್ರಕ್ಕೆ ಪ್ರವೇಶ ನೀಡಲಿದೆ. ಇದು ತಮಿಳು ಭಾಷೆಯಲ್ಲಿ ತನ್ನ ಮೊದಲ ಚಲನಚಿತ್ರವನ್ನು ನಿರ್ಮಾಣ ಮಾಡಲಿದೆ. ಭಾರತದ ಎಲ್ಲ ಮುಖ್ಯವಾಹಿನಿಯ ಭಾಷೆಗಳಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು ಕಂಪನಿ ಉದ್ದೇಶಿಸಿದೆ ಎಂದು ಪ್ರೊಡಕ್ಷನ್ ಹೌಸ್ ಹೇಳಿಕೊಂಡಿದೆ.
ತಮಿಳಿನ ಹೊರತಾಗಿ, ಧೋನಿ ಎಂಟರ್‌ಟೈನ್‌ಮೆಂಟ್ ಅನೇಕ ಚಲನಚಿತ್ರ ನಿರ್ಮಾಪಕರು ಮತ್ತು ಸ್ಕ್ರಿಪ್ಟ್ ರೈಟರ್‌ಗಳೊಂದಿಗೆ ವೈಜ್ಞಾನಿಕ ಕಾದಂಬರಿ, ಸಸ್ಪೆನ್ಸ್ ಥ್ರಿಲ್ಲರ್, ಅಪರಾಧ, ನಾಟಕ ಮತ್ತು ಹಾಸ್ಯ ಸೇರಿದಂತೆ ಅತ್ಯಾಕರ್ಷಕ ಮತ್ತು ಅರ್ಥಪೂರ್ಣ ಕಂಟೆಂಟ್ ರಚಿಸಲು ಮತ್ತು ನಿರ್ಮಿಸಲು ಮಾತುಕತೆ ನಡೆಸುತ್ತಿದೆ. ಚೆನ್ನೈ ಸೂಪರ್ ಕಿಂಗ್ಸ್ ಆಡಿದ ಐಪಿಎಲ್ ಪಂದ್ಯಗಳನ್ನು ಆಧರಿಸಿದ ಜನಪ್ರಿಯ ಸಾಕ್ಷ್ಯಚಿತ್ರ 'ರೋರ್ ಆಫ್ ದಿ ಲಯನ್' ಅನ್ನು ಧೋನಿ ಎಂಟರ್‌ಟೈನ್‌ಮೆಂಟ್ ಈಗಾಗಲೇ ನಿರ್ಮಿಸಿ ಬಿಡುಗಡೆ ಮಾಡಿರುವುದನ್ನು ಸ್ಮರಿಸಬಹುದು.
ಕ್ಯಾನ್ಸರ್ ಜಾಗೃತಿ ಕುರಿತ ಕಿರುಚಿತ್ರ "ವುಮೆನ್ಸ್ ಡೇ ಔಟ್" ಅನ್ನು ಸಹ ಪ್ರೊಡಕ್ಷನ್ ಹೌಸ್ ನಿರ್ಮಿಸಿದೆ. ಕ್ರಿಕೆಟಿಗ ಧೋನಿ ತಮಿಳುನಾಡಿನ ಜನರೊಂದಿಗೆ ಅಸಾಧಾರಣ ಬಾಂಧವ್ಯ ಹೊಂದಿದ್ದಾರೆ. ಹೀಗಾಗಿ ತಮ್ಮ ಮೊದಲ ಚಲನಚಿತ್ರವನ್ನು ತಮಿಳಿನಲ್ಲಿ ನಿರ್ಮಿಸುವ ಮೂಲಕ ಈ ವಿಶೇಷ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಕಂಪನಿ ಪ್ರಯತ್ನಿಸುತ್ತಿದೆ ಎಂದು ಧೋನಿ ಎಂಟರ್‌ಟೈನ್‌ಮೆಂಟ್ ಪ್ರಕಟಣೆ ತಿಳಿಸಿದೆ.
ಫ್ಯಾಮಿಲಿ ಎಂಟರ್‌ಟೈನರ್ ಆಗಿರುವ ಈ ಚಿತ್ರವನ್ನು ಧೋನಿ ಎಂಟರ್‌ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕಿ ಸಾಕ್ಷಿ ಸಿಂಗ್ ಧೋನಿ ಅವರು ಪರಿಕಲ್ಪನೆ ಮಾಡಿದ್ದಾರೆ. ಹೊಸ ಯುಗದ ಗ್ರಾಫಿಕ್ ಕಾದಂಬರಿ 'ಅಥರ್ವ - ದಿ ಒರಿಜಿನ್' ಅನ್ನು ಬರೆದಿರುವ ರಮೇಶ್ ತಮಿಳ್ಮಣಿ ಅವರು ನಿರ್ದೇಶಿಸಲಿದ್ದಾರೆ ಎಂದು ಪ್ರೊಡಕ್ಷನ್ ಹೌಸ್ ಹೇಳಿದೆ. ಚಿತ್ರದ ತಾರಾಗಣ ಮತ್ತು ತಂಡವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು.
ಸಾಕ್ಷಿ ಅವರು ಬರೆದ ಪರಿಕಲ್ಪನೆಯನ್ನು ಓದಿದ ಕ್ಷಣದಿಂದ ಇದು ವಿಶೇಷವಾಗಿದೆ ಎಂದು ನನಗೆ ಅನಿಸಿತ್ತು. ಪರಿಕಲ್ಪನೆ ಹೊಸತನದಿಂದ ಕೂಡಿದ್ದು, ವಿನೋದ ತುಂಬಿದ ಕೌಟುಂಬಿಕ-ಮನರಂಜನೆಯ ಎಲ್ಲಾ ಅಂಶಗಳನ್ನು ಇದು ಹೊಂದಿದೆ. ಇಂಥದೊಂದು ಹೊಸ ಪರಿಕಲ್ಪನೆಯ ಮೇಲೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ಹೊಸ ಪರಿಕಲ್ಪನೆಯನ್ನು ಫೀಚರ್ ಫಿಲ್ಮ್ ಕಥಾವಸ್ತುವನ್ನಾಗಿ ರೂಪಿಸಿ, ಚಿತ್ರ ನಿರ್ದೇಶನ ಮಾಡಲಿದ್ದೇನೆ ಎಂದು ನಿರ್ದೇಶಕ ರಮೇಶ್ ತಮಿಳ್ಮಣಿ ಹೇಳಿದ್ದಾರೆ.
ಇದನ್ನೂ ಓದಿ: ಸಾಂಪ್ರದಾಯಿಕ ಉಡುಗೆಯಲ್ಲಿ ಧೋನಿ, ಸಾಕ್ಷಿ ಮಿಂಚು; ದೇಶಿ ಸ್ಟೈಲ್ ಬಟ್ಟೆ ಹಾಕಿದ್ಯಾಕೆ!?