ಕೊಲಂಬೊ: ಕರ್ನಾಟಕದ ಯವ ಆಟಗಾರ ದೇವದತ್ ಪಡಿಕ್ಕಲ್ 21ನೇ ಶತಮಾನದಲ್ಲಿ ಜನಿಸಿ, ಭಾರತ ತಂಡದ ಪರ ಪದಾರ್ಪಣೆ ಮಾಡಿದ ಮೊದಲ ಕ್ರಿಕೆಟಿಗ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ದೇವದತ್ ಪಡಿಕ್ಕಲ್ ಜುಲೈ 7, 2000ದಲ್ಲಿ ಜನಿಸಿದ್ದಾರೆ. 2000ದ ಇಸವಿಯ ನಂತರ ಜನಿಸಿ ಭಾರತ ತಂಡದಲ್ಲಿ ಆಡಿದ ಮೊದಲ ಕ್ರಿಕೆಟರ್ ಎನಿಸಿಕೊಂಡಿದ್ದಾರೆ.
ಬುಧವಾರ ಶ್ರೀಲಂಕಾ ವಿರುದ್ದ ನಡೆದ 2ನೇ ಟಿ20 ಪಂದ್ಯದಲ್ಲಿ ಭಾರತ ತಂಡದ ಪರ ರಾಯಲ್ ಚಾಲೆಂಜರ್ಸ್ ಸ್ಟಾರ್ ಓಪನರ್ ಪಡಿಕ್ಕಲ್ ಪದಾರ್ಪಣೆ ಮಾಡಿದ್ದರು. ಆದರೆ ಈ ಪಂದ್ಯದಲ್ಲಿ ಅವರು 23 ಎಸೆತಗಳಲ್ಲಿ 29 ರನ್ಗಳಿಸಿ ವಿಕೆಟ್ ಒಪ್ಪಿಸುವ ಮೂಲಕ ಮೊದಲ ಪಂದ್ಯವನ್ನು ಸ್ಮರಣೀಯವನ್ನಾಗಿಸಿಕೊಳ್ಳುವಲ್ಲಿ ವಿಫಲರಾದರು.
ಇದೇ ಪಂದ್ಯದಲ್ಲಿ ಪಡಿಕ್ಕಲ್ ಜೊತೆಗೆ ಮಹರಾಷ್ಟ್ರದ ರುತುರಾಜ್ ಗಾಯಕ್ವಾಡ್, ರಾಜಸ್ಥಾನದ ಚೇತನ್ ಸಕಾರಿಯಾ, ದೆಹಲಿಯ ನಿತೀಶ್ ರಾಣಾ ಕೂಡ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ರಾಣಾ ಮತ್ತು ಸಕಾರಿಯಾ ಈಗಾಗಲೇ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ.
ಅಂಡರ್ 19, ಕರ್ನಾಟಕ ಪ್ರೀಮಿಯರ್ ಲೀಗ್ , ಸಯ್ಯದ್ ಮುಷ್ತಾಕ್ ಅಲಿ, ವಿಜಯ್ ಹಜಾರೆ ಟ್ರೋಫಿ ಮತ್ತು ರಣಜಿ ಕ್ರಿಕೆಟ್ನಲ್ಲಿ ರನ್ಗಳ ಹೊಳೆಯರಿಸಿದ್ದ ಪಡಿಕ್ಕಲ್ 2020ರ ಐಪಿಎಲ್ ಆವೃತ್ತಿಯಲ್ಲಿ ಆಡುವ ಅವಕಾಶ ಪಡೆದಿದ್ದರು. ಅಲ್ಲದೆ ಆ ಆವೃತ್ತಿಯಲ್ಲಿ ಆರ್ಸಿಬಿಯ ಟಾಪ್ ರನ್ ಸ್ಕೋರರ್ ಮತ್ತು ಉದಯೋನ್ಮಖ ಆಟಗಾರ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಭಾರತ ತಂಡಕ್ಕೂ ಪದಾರ್ಪಣೆ ಮಾಡಿ ತಮ್ಮ ಕನಸನ್ನು ನನಸಾಗಿಸಿಕೊಂಡಿದ್ದಾರೆ.
2ನೇ ಟಿ20 ಪಂದ್ಯದಲ್ಲಿ ಭಾರತ 132 ರನ್ಗಳಿಸಿತ್ತು. ಶ್ರೀಲಂಕಾ ಧನಂಜಯ ಡಿ ಸಿಲ್ವಾ ಅವರ ಸಾಹಸದಿಂದ ಇನ್ನು 2 ಎಸೆತಗಳಿರುವಂತೆ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿ ಸರಣಿಯನ್ನು 1-1ರಲ್ಲಿ ಸಮಬಲ ಸಾಧಿಸಿಕೊಂಡಿತು.
ಇದನ್ನು ಓದಿ:ಧನಂ'ಜಯ' ಆಟ: ರೋಚಕ ಹೋರಾಟದಲ್ಲಿ ಲಂಕಾಗೆ ಮಣಿದ ಭಾರತ