ಮುಂಬೈ: ಎರಡನೇ ಟಿ20 ಪಂದ್ಯದಲ್ಲಿ ಭಾರತೀಯ ವನಿತೆಯರ ತಂಡ ವಿರುದ್ಧ ಆಸ್ಟ್ರೇಲಿಯಾ ತಂಡ ಆರು ವಿಕೆಟ್ಗಳ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ಅಂತರದಿಂದ ಸಮಬಲಗೊಳಿಸಿದೆ. ಜನವರಿ 6ರಂದು ನಡೆದ ಮೊದಲ ಮೊದಲ ಪಂದ್ಯದಲ್ಲಿ ಭಾರತ 9 ವಿಕೆಟ್ಗಳ ಗೆಲುವು ದಾಖಲಿಸಿತ್ತು. ಈಗ ಅಂತಿಮ ಟಿ20 ಪಂದ್ಯ ಜನವರಿ 9ರಂದು ನಡೆಯಲಿದ್ದು, ಕುತೂಹಲ ಕೆರಳಿಸಿದೆ.
ನವಿ ಮುಂಬೈನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆಸೀಸ್ ನಾಯಕಿ ಅಲಿಸ್ಸಾ ಹೀಲಿ ಟಾಸ್ ಗೆದ್ದು ಟೀಂ ಇಂಡಿಯಾಕ್ಕೆ ಬ್ಯಾಟಿಂಗ್ ಆಹ್ವಾನಿಸಿದ್ದರು. ಇದರಿಂದ ನಿಗದಿತ 20 ಓವರ್ಗಳಲ್ಲಿ ಭಾರತೀಯ ಆಟಗಾರ್ತಿಯರು ಎಂಟು ವಿಕೆಟ್ ಕಳೆದುಕೊಂಡು 130 ರನ್ಗಳನ್ನು ಪೇರಿಸಲಷ್ಟೇ ಶಕ್ತರಾದರು. ಈ ಗುರಿಯನ್ನು ಕಾಂಗರೂ ಪಡೆ 19 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 133 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ಮೊದಲ ಬ್ಯಾಟ್ ಮಾಡಿದ ಭಾರತೀಯ ಆಟಗಾರ್ತಿಯರು ತಂಡಕ್ಕೆ ಉತ್ತಮ ಆರಂಭ ಒದಗಿಸಲು ವಿಫಲರಾದರು. ಆಸೀಸ್ನ ಶಿಸ್ತಿನ ಬೌಲಿಂಗ್‌ಗೆ ಬೇಗ ವಿಕೆಟ್ ಒಪ್ಪಿಸಿದರು. ಮೊದಲು ಪಂದ್ಯದಲ್ಲಿ 64 ರನ್ಗಳನ್ನು ಸಿಡಿಸಿ ಮಿಂಚಿದ್ದ ಶಫಾಲಿ ವರ್ಮಾ ಹೆಚ್ಚು ಹೊತ್ತು ನಿಲ್ಲದೇ ನಿರಾಸೆ ಮೂಡಿಸಿದರು. ಕೇವಲ ಒಂದು ರನ್ ಗಳಿಸಿದ ಶಫಾಲಿ ಇನ್ನಿಂಗ್ಸ್ನ ಎರಡನೇ ಓವರ್ನಲ್ಲಿ ಕಿಮ್ ಗಾರ್ತ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ಬಳಿಕ ಬಂದ ಜೆಮಿಮಾ ರಾಡ್ರಿಗಸ್ 13 ರನ್ ಬಾರಿಸಿ ನಿರ್ಗಮಿಸಿದರು. ಮತ್ತೊಂದೆಡೆ, ಸ್ಮೃತಿ ಮಂಧಾನ ಕೂಡ 23 ರನ್ಗಳಿಗೆ ತಮ್ಮ ಆಟ ಮುಗಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ ಸಹ 6 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ರಿಚಾ ಘೋಷ್ 23 ರನ್ಗಳ ಕೊಡುಗೆ ನೀಡಲು ಶಕ್ತರಾದರು. ಆದರೆ, ಸತತವಾಗಿ ವಿಕೆಟ್‌ಗಳು ಬೀಳುತ್ತಿದ್ದರೂ ಆಲ್ ರೌಂಡರ್ ದೀಪ್ತಿ ಶರ್ಮಾ ಕೊನೆಯವರೆಗೂ ಹೋರಾಡಿದರು. 27 ಎಸೆತಗಳಲ್ಲಿ 30 ರನ್ ಗಳಿಸಿದ ಅವರು, ತಂಡದ ಮೊತ್ತವನ್ನು ತನ್ನಿಂದಾದಷ್ಟು ದೂರ ತಳ್ಳಿದರು. ಅಂತಿಮವಾಗಿ 130 ರನ್ಗಳನ್ನು ಟೀಂ ಇಂಡಿಯಾ ಕಲೆ ಹಾಕಲು ಸಾಧ್ಯವಾಯಿತು.
ಈ ಗುರಿ ಬೆನ್ನಟ್ಟಿದ ಆಸೀಸ್ ವನಿತೆಯರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಅಲಿಸ್ಸಾ ಹೀಲಿ (26), ಬೆತ್ ಮೂನಿ (20), ತಹ್ಲಿಯಾ ಮೆಕ್‌ಗ್ರಾತ್ (19) ಮತ್ತು ಫೋಬೆ ಲಿಚ್‌ಫೀಲ್ಡ್ (ಅಜೇಯ 18) ಸೇರಿ ಎಲ್ಲರೂ ಬ್ಯಾಟ್‌ನಿಂದ ಕೊಡುಗೆ ನೀಡಿ ತಂಡವನ್ನು ಗೆಲ್ಲಿಸಿದರು. ಭಾರತ ಪರ ಭಾರತದ ಪರ ದೀಪ್ತಿ ಶರ್ಮಾ (2/22) ಎರಡು ವಿಕೆಟ್ ಪಡೆದರೆ, ಶ್ರೇಯಾಂಕಾ ಪಾಟೀಲ್ (1/40) ಮತ್ತು ಪೂಜಾ ವಸ್ತ್ರಕರ್ (1/8) ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಅಫ್ಘಾನಿಸ್ತಾನ ಟಿ20 ಸರಣಿಯಿಂದ ಪಾಂಡ್ಯ, ಸೂರ್ಯ ಔಟ್: 14 ತಿಂಗಳ ನಂತರ ತಂಡಕ್ಕೆ ರೋಹಿತ್, ಕೊಹ್ಲಿ ವಾಪಸ್