ಮೆಲ್ಬೋರ್ನ್: 100ನೇ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ ವಿಶ್ವದ 10ನೇ ಆಟಗಾರ, ದ್ವಿಶತಕ ಸಿಡಿಸಿದ ವಿಶ್ವದ 2ನೇ ಪ್ಲೇಯರ್, 8 ಸಾವಿರ ರನ್ ಗಳಿಸಿದ ಆಸೀಸ್ನ 8ನೇ ಆಟಗಾರ..! ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ನಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ದಾಖಲೆಗಳ ಮೇಲೆ ದಾಖಲೆ ಬರೆದರು.
ಮೆಲ್ಬೋರ್ನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯ ಡೇವಿಡ್ ವಾರ್ನರ್ರ ಐತಿಹಾಸಿಕ ಆಟಕ್ಕೆ ಸಾಕ್ಷಿಯಾಯಿತು. ಆಸೀಸ್ ಆರಂಭಿಕ ಬ್ಯಾಟರ್ಗೆ ಇದು 100ನೇ ಟೆಸ್ಟ್ ಪಂದ್ಯವಾಗಿದೆ. 3 ವರ್ಷಗಳಿಂದ ಶತಕದ ಬರ ಅನುಭವಿಸುತ್ತಿರುವ ವಾರ್ನರ್, ಕೊನೆಗೂ ತಮ್ಮ ವಿಶೇಷ ಪಂದ್ಯದಂದು ಐತಿಹಾಸಿಕ ದಾಖಲೆ ಬರೆದರು. ವಾರ್ನರ್ ಕೊನೆಯ ಬಾರಿ ಅಂದರೆ 2020 ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 111* ಗಳಿಸಿದ್ದೇ ಕೊನೆಯ ಹಂಡ್ರೆಡ್ ಆಗಿತ್ತು.
ನೂರನೇ ಪಂದ್ಯದಲ್ಲಿ 200 ರನ್: ನೂರನೇ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಾಧನೆ ಮಾಡಿದ ವಿಶ್ವದ 2ನೇ ಆಟಗಾರ ಎಂಬ ಖ್ಯಾತಿಗೆ ವಾರ್ನರ್ ಪಾತ್ರರಾದರು. ಇದಕ್ಕೂ ಮೊದಲು ಇಂಗ್ಲೆಂಡ್‌ನ ಜೋ ರೂಟ್ ತಮ್ಮ 100 ನೇ ಪಂದ್ಯದಲ್ಲಿ 200 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಆಸೀಸ್ ಆರಂಭಿಕ ಆಟಗಾರ 254 ಎಸೆತಗಳಲ್ಲಿ ಬರೋಬ್ಬರಿ 200 ರನ್ ಗಳಿಸಿದರು. ಈ ವೇಳೆ ಸ್ನಾಯುಸೆಳೆತಕ್ಕೀಡಾಗಿ ಮೈದಾನದಿಂದ ಹೊರನಡೆದರು.
8 ಸಾವಿರ ರನ್ ಕ್ಲಬ್: ಇನ್ನು ಡೇವಿಡ್ ವಾರ್ನರ್ 120 ರನ್ ಗಳಿಸಿದಾಗ ಟೆಸ್ಟ್ ಕ್ರಿಕೆಟ್ನಲ್ಲಿ 8 ಸಾವಿರ ರನ್ ಶಿಖರ ದಾಟಿದರು. ಈ ಮೂಲಕ ಇಷ್ಟು ರನ್ ಬಾರಿಸಿದ ಆಸ್ಟ್ರೇಲಿಯಾದ 8 ನೇ ಆಟಗಾರ ಎಂಬ ದಾಖಲೆ ಬರೆದರು.
ನೂರನೇ ಪಂದ್ಯದಲ್ಲಿ ಶತಕ ಸಿಡಿಸಿದವರು: ಕಾಲಿನ್ ಕೌಡ್ರೆ (ಇಂಗ್ಲೆಂಡ್), ಜಾವೇದ್ ಮಿಯಾಂದಾದ್ (ಪಾಕಿಸ್ತಾನ), ಗಾರ್ಡನ್ ಗ್ರೀನಿಡ್ಜ್ (ವೆಸ್ಟ್ ಇಂಡೀಸ್), ಅಲೆಕ್ ಸ್ಟೀವರ್ಟ್ (ಇಂಗ್ಲೆಂಡ್), ಇಂಜುಮಾಮ್ ಉಲ್ ಹಕ್ (ಪಾಕಿಸ್ತಾನ), ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ), ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ), ಹಾಶಿಮ್ ಆಮ್ಲಾ (ದಕ್ಷಿಣ ಆಫ್ರಿಕಾ), ಜೋ ರೂಟ್ (ಇಂಗ್ಲೆಂಡ್).
ಕ್ರಿಕೆಟ್ನಲ್ಲಿ 45ನೇ ಶತಕ ಬಾರಿಸಿದ ಡೇವಿಡ್ ವಾರ್ನರ್ ಸಕ್ರಿಯ ಆಟಗಾರರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. ವಿರಾಟ್ ಕೊಹ್ಲಿ 72 ಶತಕ ಬಾರಿಸಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್ 44 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಮತ್ತು ಸ್ಟೀವ್ ಸ್ಮಿತ್ ತಲಾ 41 ಶತಕಗಳೊಂದಿಗೆ ಜಂಟಿ 4ನೇ ಸ್ಥಾನದಲ್ಲಿದ್ದಾರೆ.
ಓದಿ: ಐಪಿಎಲ್ನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದ್ದು ನಂಬೋಕೆ ಆಗ್ತಿಲ್ಲ: ಕ್ಯಾಮರೂನ್ ಗ್ರೀನ್