ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಪತ್ನಿ ವಿನಿ ರಾಮನ್ ದಂಪತಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಕಳೆದ ವರ್ಷ ಮಾರ್ಚ್ 18 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ತಮಿಳುನಾಡು ಚೆನ್ನೈ ಮೂಲದ ವಿನಿ ರಾಮನ್ ಮತ್ತು ಆಸ್ಟ್ರೇಲಿಯಾ ಮೂಲದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಈ ಶುಭ ವಿಚಾರವನ್ನು ಸ್ವತಃ ವಿನಿ ರಾಮನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಸೆಪ್ಟೆಂಬರ್ನಲ್ಲಿ ನಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ' ಎಂದು ಬರೆದುಕೊಂಡಿದ್ದಾರೆ. ಪೋಸ್ಟ್ನಲ್ಲಿ ಮಗುವಿನ ಬಟ್ಟೆಯ ಚಿತ್ರವನ್ನು ಶೇರ್ ಮಾಡಿದ್ದು, 'ಬೇಬಿ ಬಾಯ್' ಹ್ಯಾಶ್ ಟ್ಯಾಗ್ ಬಳಸಿದ್ದಾರೆ. ಹೀಗಾಗಿ ಮ್ಯಾಕ್ಸ್‌ವೆಲ್ ದಂಪತಿ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದು ಖಚಿತವಾಗಿದೆ.
ವಿನಿ ರಾಮನ್ ಪೋಸ್ಟ್ ಹಾಕುತ್ತಿದ್ದಂತೆ, ಅಭಿಮಾನಿಗಳು, ಕ್ರಿಕೆಟ್ ತಾರೆಯರು ಅಭಿನಂದನೆ ತಿಳಿಸಿದ್ದಾರೆ. ಬಾಲಿವುಡ್ ನಟಿ, ವಿರಾಟ್ ಪತ್ನಿ ಅನುಷ್ಕಾ ಶರ್ಮಾ ಸೇರಿದಂತೆ ಅನೇಕರು ಕಮೆಂಟ್ ಮಾಡಿದ್ದಾರೆ. ಅಭಿಮಾನಿಗಳಂತೂ ಕೆಂಪು ಹೃದಯದ ಎಮೋಜಿನೊಂದಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಐಪಿಎಲ್ ನಡುವೆ ಗ್ಲೆನ್ ಮ್ಯಾಕ್ಸ್‌ವೆಲ್ ಸಿಹಿ ಸುದ್ದಿ ನೀಡಿದ್ದ, ಫ್ಯಾನ್ಸ್ಗೆ ಖುಷಿ ತಂದುಕೊಟ್ಟಿದೆ.
ಇದನ್ನೂ ಓದಿ: 6,6,4,4,2,4,1,4,6,4,4,4,1: ಯಶಸ್ವಿ ಜೈಸ್ವಾಲ್ ದಾಖಲೆಯ ಅರ್ಧಶತಕ- ಕ್ರಿಕೆಟ್ ದಿಗ್ಗಜರ ಗುಣಗಾನ
ಡೇಟಿಂಗ್ಗೆ ಮದುವೆಯ ಮುದ್ರೆ: ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ವಿನಿ ರಾಮನ್ 5 ವರ್ಷಗಳ ಕಾಲ ಡೇಟಿಂಗ್ ನಡೆಸುತ್ತಿದ್ದರು. ಬಳಿಕ ಎರಡೂ ಕುಟುಂಬದವರನ್ನು ಒಪ್ಪಿಸಿ ಫೆಬ್ರವರಿಯಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದರು. ನಂತರ ಇಬ್ಬರು ಮಾರ್ಚ್ 18 ರಂದು ಮದುವೆಯಾದರು. ಮೊದಲು ಆಸ್ಟ್ರೇಲಿಯಾದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿ, ನಂತರ ಭಾರತದಲ್ಲಿ ತಮಿಳು ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯಾದರು. ಹೀಗಾಗಿ ಕೇವಲ ವೃತ್ತಿಯಲ್ಲಿ ಮಾತ್ರ ಭಾರತದೊಂದಿಗೆ ಸಂಬಂಧ ಹೊಂದಿದ್ಧ ಮ್ಯಾಕ್ಸ್‌ವೆಲ್ ನಂತರ ಭಾರತೀಯ ಮೂಲದ ಯುವತಿಯನ್ನು ಕೈ ಹಿಡಿದು ವೈಯಕ್ತಿಕ ಜೀವನದಲ್ಲೂ ದೇಶದೊಂದಿಗೆ ವಿಶೇಷ ಬಾಂಧವ್ಯ ಬೆಳೆಸಿಕೊಂಡರು.
ಮ್ಯಾಕ್ಸ್‌ವೆಲ್ ಆರ್‌ಸಿಬಿ ಪರ ಸಾವಿರ ರನ್: ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು 2021 ರಲ್ಲಿ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು 14.25 ಕೋಟಿ ರೂಪಾಯಿಗೆ ಖರೀದಿಸಿತು. ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ 1,000 ರನ್ ಪೂರೈಸುವ ಮೂಲಕ ತಮ್ಮ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿ ಜೀವನಕ್ಕೆ ಮತ್ತೊಂದು ಗರಿಯನ್ನು ಸೇರಿಸಿದರು.
ಏಪ್ರಿಲ್ 22 ರಂದು ಆರ್‌ಸಿಬಿ ತವರು ಕ್ರೀಡಾಂಗಣ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ (ಆರ್ಆರ್) ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಈ ಮೈಲಿಗಲ್ಲನ್ನು ತಲುಪಿದರು. ಆರ್‌ಸಿಬಿ ಸೇರುವುದಕ್ಕೂ ಮುನ್ನ ಮ್ಯಾಕ್ಸ್‌ವೆಲ್ ನಟಿ ಪ್ರೀತಿ ಜಿಂಟಾ ಪಾಲುದಾರತ್ವದ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದರು.
ಇದನ್ನೂ ಓದಿ: ತಮಿಳು ಸಂಪ್ರದಾಯದಂತೆ ಮದುವೆಯಾದ ವಿನಿ- ಮ್ಯಾಕ್ಸ್‌ವೆಲ್.. ಶೀಘ್ರವೇ ಆರ್‌ಸಿಬಿ ತಂಡ ಸೇರ್ಪಡೆ