ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಶುಭ್‌ಮನ್ ಗಿಲ್ ತಮಿಳುನಾಡಿನ ಚೆನ್ನೈನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಆದರು. ಜ್ವರದಿಂದ ಬಳಲುತ್ತಿದ್ದ ಗಿಲ್ ಅವರ ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆ ಕಡಿಮೆ ಇದ್ದ ಕಾರಣ ಚಿಕಿತ್ಸೆ ನೀಡಲಾಗುತ್ತಿತ್ತು.
ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಮೊದಲ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್ ಅವರಿಗೆ ಜ್ವರ ಕಾಣಿಸಿಕೊಂಡಿತ್ತು. ಚೆನ್ನೈನಲ್ಲಿ ಭಾನುವಾರ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಿಂದ ಈ ಸ್ಟಾರ್ ಆಟಗಾರ ಹೊರಗುಳಿದಿದ್ದರು. ಅಲ್ಲದೇ, ತಂಡದ ಇತರ ಆಟಗಾರರೊಂದಿಗೆ ನವದೆಹಲಿಗೆ ಪ್ರಯಾಣಿಸಲು ಸಾಧ್ಯವಾಗಿರಲಿಲ್ಲ. ದೆಹಲಿಯಲ್ಲಿ ಅಕ್ಟೋಬರ್ 11ರಂದು ಅಫ್ಘಾನಿಸ್ತಾನ ವಿರುದ್ಧ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯವಾಡಲಿದ್ದು, ಈ ಪಂದ್ಯದಿಂದಲೂ ಗಿಲ್ ಹೊರಗುಳಿದಿದ್ದಾರೆ.
ಜ್ವರ ಕಾಣಿಸಿಕೊಂಡ ಕಾರಣ ಗಿಲ್ ಅವರನ್ನು ಚೆನ್ನೈನ 'ಕಾವೇರಿ' ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮೊದಲು ಅವರ ರಕ್ತದಲ್ಲಿ ಪ್ಲೇಟ್ಲೆಟ್ ಸಂಖ್ಯೆ 75 ಸಾವಿರ ಇತ್ತು. ಈಗ ಅದು ಒಂದು ಲಕ್ಷಕ್ಕೆ ತಲುಪಿದ್ದರಿಂದ ಡಿಸ್ಚಾರ್ಜ್ ಮಾಡಲಾಗಿದೆ. ಅಕ್ಟೋಬರ್ 14ರಂದು ಗುಜರಾತ್ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಬಹುನಿರೀಕ್ಷಿತ ಪಂದ್ಯಕ್ಕೆ ಅವರ ಲಭ್ಯತೆಯ ಬಗ್ಗೆ ಪ್ರಶ್ನೆಗಳೆದ್ದಿವೆ.
ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಆರು ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. ಈ ಮ್ಯಾಚ್ಗೆ ಗಿಲ್ ಅಲಭ್ಯತೆಯಿಂದಾಗಿ ಇಶಾನ್ ಕಿಶನ್ ಅವರು ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಬ್ಯಾಟಿಂಗ್ ಆರಂಭಿಸಿದ್ದರು. ಆದರೆ, ಈ ಪಂದ್ಯದಲ್ಲಿ ಇಬ್ಬರೂ ಶೂನ್ಯ ಸುತ್ತಿದ್ದರು. ಬುಧವಾರ ಪಾಕ್ ವಿರುದ್ಧ ಸಹ ರೋಹಿತ್ ಶರ್ಮಾ ಅವರೊಂದಿಗೆ ಕಿಶನ್ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಆಸ್ಟ್ರೇಲಿಯಾ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಹಾಗೂ ಅಜೇಯ ಆಟವಾಡಿದ್ದ ಕನ್ನಡಿಗ ಕೆ.ಎಲ್.ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ.
ಶುಭ್‌ಮನ್ ಗಿಲ್ ಕುರಿತು ಮಂಗಳವಾರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮಾಧ್ಯಮ ಹೇಳಿಕೆ ನೀಡಿದ್ದು, ಗಿಲ್ ಅವರನ್ನು ವೈದ್ಯಕೀಯ ತಂಡವು ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಯುವ ಬಲಗೈ ಬ್ಯಾಟರ್ ಗಿಲ್ ವೈಟ್‌ಬಾಲ್ ಸ್ವರೂಪದಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಅವರು ಬೇಗ ಚೇತರಿಸಿಕೊಳ್ಳಲಿ, ತಂಡ ಸೇರಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.
ಇದನ್ನೂ ಓದಿ: ICC Cricket World Cup 2023: ಕೆಎಲ್ ರಾಹುಲ್ಗೆ ಗಾಯವೇ ವರವಾಯ್ತೆ?.. ಕಮ್ಬ್ಯಾಕ್ ಬಳಿಕ ರೊಚ್ಚಿಗೇಳುತ್ತಿರುವ ಕನ್ನಡಿಗ!