ಚೆನ್ನೈ, ತಮಿಳುನಾಡು: ಆಸ್ಟ್ರೇಲಿಯಾ ವಿರುದ್ಧ ಅಮೋಘ ರೀತಿಯಲ್ಲಿ ಗೆಲುವು ಸಾಧಿಸುವ ಮೂಲಕ ಭಾರತ ವಿಶ್ವಕಪ್ ಅಭಿಯಾನವನ್ನು ಆರಂಭಿಸಿದೆ. ಈ ಪಂದ್ಯದಲ್ಲಿ ಸ್ಪಿನ್ನರ್ಗಳು ಉತ್ತಮ ಪ್ರದರ್ಶನ ತೋರಿದ್ದು, ಅದರಲ್ಲೂ ಟೀಂ ಇಂಡಿಯಾದ ನಂಬರ್-1 ಆಲ್ ರೌಂಡರ್ ರವೀಂದ್ರ ಜಡೇಜಾ ಅಮೋಘ ಪ್ರದರ್ಶನ ನೀಡಿದರು.
ಪಂದ್ಯದ ಬಳಿಕ ಮಾತನಾಡಿದ ಜಡೇಜಾ, "ನಾನು ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತೇನೆ. ಹಾಗಾಗಿ ಇಲ್ಲಿನ ಪರಿಸ್ಥಿತಿಗಳು ನನಗೆ ತಿಳಿದಿವೆ. ನಾನು ಪಿಚ್ ನೋಡಿದಾಗ 2-3 ವಿಕೆಟ್ ಆದ್ರೂ ಪಡೆಯಬೇಕು ಎಂದು ನಾನು ಭಾವಿಸಿದೆ. ಅದೃಷ್ಟವಶಾತ್ ನಾನು 3 ವಿಕೆಟ್ ಪಡೆದಿದ್ದೇನೆ ಎಂದರು.
ಚೆಪಾಕ್‌ನಲ್ಲಿರುವ ಪಿಚ್ ಒಂದು ರೀತಿ ಟೆಸ್ಟ್ ಪಿಚ್ ಥರಾ ಇತ್ತು. ಹೀಗಾಗಿ ನಾನು ಸ್ಟಂಪ್‌ಗೆ ಬೌಲ್ ಮಾಡಲು ಪ್ರಯತ್ನಿಸುತ್ತಿದ್ದೆ. ಆದರೆ ಬಾಲ್ ಟರ್ನ್ ಆಗ್ತಿತ್ತು. ಗರಿಷ್ಠ ವಿಕೆಟ್‌ಗಳನ್ನು ಪಡೆಯುವುದು ನಮ್ಮ ಏಕೈಕ ಗುರಿಯಾಗಿತ್ತು. ಚೆನ್ನೈನಲ್ಲಿ ಪ್ರೇಕ್ಷಕರು ಯಾವಾಗಲೂ ಉತ್ತಮ ಸಂಖ್ಯೆಯಲ್ಲಿ ಸೇರುತ್ತಾರೆ. ನಮಗೆ ಇಲ್ಲಿ ತುಂಬಿದ ಮನೆಯಂತೆ ಕಾಣುತ್ತದೆ ಮತ್ತು ಇದನ್ನು ನೋಡಲು ಅದ್ಭುತವಾಗಿರುತ್ತದೆ ಎಂದು ಜಡೇಜಾ ಹೇಳಿದರು.
ಕುಲದೀಪ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರು ಸ್ಪಿನ್ನರ್ ಆಗಿ ಉತ್ತಮ ಲಯದಲ್ಲಿದ್ದಾರೆ. ಅವರಿಗೆ ಸಲಹೆ ಮತ್ತು ಸಹಾಯದ ಬಗ್ಗೆ ಹೇಳುವ ಅಗತ್ಯವಿಲ್ಲ. ನಾವು 2 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಾಗ ಭಯ ಕಾಡುತ್ತಿತ್ತು. ಆದರೆ, ಯಾರೂ ತುಂಬಾ ಹೈಪರ್ ಆಗಿರಲಿಲ್ಲ. ಏಕೆಂದ್ರೆ ವಿರಾಟ್ ಮತ್ತು ರಾಹುಲ್ ಕ್ರೀಸ್ನಲ್ಲಿದ್ದರು. ಅವರು ಬ್ಯಾಟಿಂಗ್ ನೋಡುವುದು ಅದ್ಭುತವಾಗಿತ್ತು ಎಂದು ಹೇಳಿದರು.
ನಾವು ದೊಡ್ಡ ತಂಡಗಳ ವಿರುದ್ಧ ಆಡಿದಾಗ ಇಂತಹ ಸಂದರ್ಭಗಳು ಬರುತ್ತವೆ. ಆದರೆ ನಮ್ಮ ಬ್ಯಾಟ್ಸ್‌ಮನ್‌ಗಳು ಒತ್ತಡವನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಮುಖ್ಯ ದೊಡ್ಡ ತಂಡವನ್ನು ಸೋಲಿಸುವುದು ಒಳ್ಳೆಯದು. ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಪ್ರತಿಯೊಂದು ತಂಡವೂ ಉತ್ತಮವಾಗಿದೆ. ಆದ್ದರಿಂದ ನಾವು ದೊಡ್ಡ ತಂಡದ ವಿರುದ್ಧ ಗೆದ್ದರೆ ಸಕಾರಾತ್ಮಕ ದಿಕ್ಕಿನಲ್ಲಿ ಹೋಗುತ್ತೇವೆ ಎಂದು ಜಡೇಜಾ ಹೇಳಿದರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಭಾರತಕ್ಕೆ 200 ರನ್ ಗಳ ಗುರಿ ನೀಡಿತ್ತು. ತಂಡದ ಪರ ಸ್ಟೀವ್ ಸ್ಮಿತ್ (46) ಮತ್ತು ಡೇವಿಡ್ ವಾರ್ನರ್ (41) ಗರಿಷ್ಠ ರನ್ ಗಳಿಸಿದರು. ಇವರಲ್ಲದೆ, ಮಾರ್ನಸ್ ಲ್ಯಾಬುಸ್ಚಾಗ್ನೆ ಕೂಡ 27 ರನ್ ಕೊಡುಗೆ ನೀಡಿದರು. ಮಿಚೆಲ್ ಸ್ಟಾರ್ಕ್ ಕೂಡ 28 ರನ್ ಗಳಿಸಿದರು. ಆಸ್ಟ್ರೇಲಿಯಾದ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಅತ್ಯಂತ ಕಳಪೆ ಆರಂಭವನ್ನು ಪಡೆಯಿತು. ತಂಡ 2 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು.
ರೋಹಿತ್ ಶರ್ಮಾ, ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಖಾತೆ ತೆರೆಯದೆ ಪೆವಿಲಿಯನ್ ಹಾದಿ ಹಿಡಿದಿದ್ದರು. ಇದಾದ ಬಳಿಕ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರಮೇಣ ಇನಿಂಗ್ಸ್ ಮುನ್ನಡೆಸಿ ತಂಡವನ್ನು ಗೆಲುವಿನ ಹೊಸ್ತಿಲಿಗೆ ಕೊಂಡೊಯ್ದರು. ಆದರೆ, ಗೆಲುವಿಗೆ ಕೆಲವೇ ರನ್‌ಗಳ ಮೊದಲು ವಿರಾಟ್ ಔಟಾದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‌ಗಳು ಕಾಂಗರೂಗಳನ್ನು ಮೊದಲ ಇನ್ನಿಂಗ್ಸ್‌ನಿಂದಲೇ ಹಿಮ್ಮೆಟ್ಟಿಸಿದರು. ಭಾರತದ ಪರ ಆಲ್ ರೌಂಡರ್ ರವೀಂದ್ರ ಜಡೇಜಾ ಅತಿ ಹೆಚ್ಚು ವಿಕೆಟ್ ಕಬಳಿಸಿದರು. 10 ಓವರ್ ಗಳಲ್ಲಿ 28 ರನ್ ನೀಡಿ 3 ವಿಕೆಟ್ ಪಡೆದರು. ಜಡೇಜಾ ಹೊರತುಪಡಿಸಿ, ಕುಲದೀಪ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ 2-2 ವಿಕೆಟ್ ಪಡೆದರು, ಮೊಹಮ್ಮದ್ ಸಿರಾಜ್, ಹಾರ್ದಿಕ್ ಪಾಂಡ್ಯ ಮತ್ತು ರವಿಚಂದ್ರನ್ ಅಶ್ವಿನ್ ತಲಾ ಒಂದು ವಿಕೆಟ್ ಪಡೆದರು.
ಓದಿ: ಕ್ರಿಕೆಟ್ ಮೈದಾನಕ್ಕೆ ಬಂದು ತೊಂದರೆ ಮಾಡಿದ 'ಜಾರ್ವೋ'ಗೆ ಬಿಗ್ ಶಾಕ್ ನೀಡಿದ ಐಸಿಸಿ