ರಾಂಚಿ (ಜಾರ್ಖಂಡ್): ಏಕದಿನ ವಿಶ್ವಕಪ್ ಕ್ರಿಕೆಟ್ ಆರಂಭಗೊಂಡಿದೆ. ರೋಹಿತ್ ಶರ್ಮಾ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ ಟ್ರೋಫಿಗಾಗಿ ಸರ್ವ ಸನ್ನದ್ಧಗೊಂಡಿದೆ. ಮೈದಾನದ ಹೊರಗೆ ಅಭಿಮಾನಿಗಳು ಅತ್ಯುತ್ಸಾಹದಲ್ಲಿದ್ದಾರೆ. ಭಾರತ ಈ ಬಾರಿ ಟ್ರೋಫಿ ಗೆಲ್ಲಲಿದೆ ಎಂಬುದು ಅವರ ನಿರೀಕ್ಷೆ.
ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಬಾಲ್ಯದ ಗೆಳೆಯ ಶಬ್ಬೀರ್ ಹುಸೇನ್ ಕೂಡ ಅದೇ ಆಶಯ ವ್ಯಕ್ತಪಡಿಸಿದ್ದಾರೆ. ಕ್ರೀಡೆಯಲ್ಲಿ ಧೋನಿಗಿದ್ದ ಉತ್ಸಾಹ ಮತ್ತು ಅಪಾರ ಆಸಕ್ತಿ ಕುರಿತು ಅವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕೆಲವು ಹಳೆಯ ಘಟನೆಗಳನ್ನು ಅವರು ತಮ್ಮ ಸ್ಮೃತಿಪಟಲದಿಂದ ಮೆಲುಕು ಹಾಕಿದರು.
"ರಾಷ್ಟ್ರೀಯ ಪಂದ್ಯವಾಗಲೀ, ಅಂತರರಾಷ್ಟ್ರೀಯ ಪಂದ್ಯವಾಗಲೀ ನನ್ನ ಸ್ನೇಹಿತ ಧೋನಿ ಪ್ರತಿ ಪಂದ್ಯವನ್ನೂ ಅದೇ ಆಸಕ್ತಿಯಿಂದ ಆಡುತ್ತಾ ಬಂದವರು. ಅವರ ಆಸಕ್ತಿಯಲ್ಲಿ ಸ್ವಲ್ಪವೂ ವ್ಯತ್ಯಾಸವಾಗುತ್ತಿರಲಿಲ್ಲ. ಅವರನ್ನು ಯಾರೊಂದಿಗೂ ಹೋಲಿಸಲಾಗದು. ಅನೇಕ ಕ್ರಿಕೆಟಿಗರು ರಾಷ್ಟ್ರೀಯ-ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಬಳಿಕ ದೇಶೀಯ ಕ್ರಿಕೆಟ್‌ನತ್ತ ಗಮನ ಕೊಡದೇ ಇರುವ ಸಾಕಷ್ಟು ಉದಾಹರಣೆಗಳಿವೆ. ಆದರೆ, ಧೋನಿ ವಿಭಿನ್ನ. ಪ್ರತಿ ಪಂದ್ಯವನ್ನೂ ಗಂಭೀರವಾಗಿ ಪರಿಗಣಿಸುತ್ತಿದ್ದರು. ಪಂದ್ಯ ಜಿಲ್ಲಾ ಮಟ್ಟದ್ದೇ ಆಗಿರಲಿ ಅಥವಾ ರಾಷ್ಟ್ರ ಮಟ್ಟದ್ದೇ ಆಗಿರಲಿ ಅವರು ಪ್ರತಿ ಪಂದ್ಯವನ್ನೂ ಗೆಲುವಿನ ದಡ ಸೇರಿಸುವತ್ತ ಆಲೋಚಿಸುತ್ತಿದ್ದರು. ಅದು ಒಂದು ದಿನದ ಪ್ರಯತ್ನವಾಗಿರಲಿಲ್ಲ. ಈವರೆಗೂ ಅದೇ ಗುಣವನ್ನು ಅವರು ಹೊಂದಿದ್ದಾರೆ. ಮೊಣಕಾಲು ಶಸ್ತ್ರಚಿಕಿತ್ಸೆಗೆ ತೆರಳುವ ಮುನ್ನವೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುವುದನ್ನು ಬಿಟ್ಟಿರಲಿಲ್ಲ. ಇಂತಹ ಉತ್ಸಾಹಿ ಆಟಗಾರ ಸಿಗುವುದು ತುಂಬಾ ವಿರಳ. ಹಾಗಾಗಿ ಉಳಿದ ಆಟಗಾರರಿಂದ ಧೋನಿ ವಿಭಿನ್ನವಾಗಿ ನಿಲ್ಲುತ್ತಾರೆ ಎಂಬುದು ನನ್ನ ನಂಬಿಕೆ" ಎಂದರು.
ಶಾಲಾ ದಿನಗಳಿಂದ ಹಿಡಿದು, ಕ್ಲಬ್ ಮತ್ತು ರಣಜಿ ಟ್ರೋಫಿವರೆಗೂ ಧೋನಿಯ ಸಹ ಆಟಗಾರನಾಗಿದ್ದವರು ಶಬ್ಬೀರ್. ಭಾರತೀಯ ಕ್ರಿಕೆಟ್ ತಂಡ ಈ ಬಾರಿ ಟ್ರೋಫಿ ಎತ್ತಿ ಹಿಡಿಯಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. "ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಧೋನಿಯ ಅನುಭವ ಬಳಸಿಕೊಳ್ಳಬಹುದು. ತಂಡ ಈ ಬಾರಿ ಸಮರ್ಥ ಹಾಗೂ ಸಮತೋಲಿತವಾಗಿದೆ. ಆಡುವ ಎಲ್ಲ ಆಟಗಾರರು ಫಾರ್ಮ್‌ನಲ್ಲಿದ್ದಾರೆ. ಧೋನಿ ಮಾರ್ಗದರ್ಶನ ಬಳಸಿಕೊಂಡಿದ್ದೇ ಆದಲ್ಲಿ ರೋಹಿತ್ ಶರ್ಮಾ ನಾಯಕತ್ವದ ತಂಡ ವಿಶ್ವಕಪ್ ಗೆಲ್ಲುವ ಹಾದಿ ಸುಲಭವಾಗಬಹುದು" ಎಂದು ಶಬ್ಬೀರ್ ಸಲಹೆ ನೀಡಿದರು.
ಶಾಲಾ ದಿನಗಳಲ್ಲಿ ಇಬ್ಬರೂ ಸೇರಿ 376 ರನ್‌ಗಳ ಜೊತೆಯಾಟವಾಡಿದ್ದು, ಓಡಾಡಿದ ಕ್ರೀಡಾಂಗಣ ಸೇರಿದಂತೆ ಧೋನಿ ಅವರೊಂದಿಗಿನ ಬಾಲ್ಯದ ಒಡನಾಟವನ್ನು ಶಬ್ಬೀರ್ ಹಂಚಿಕೊಂಡರು. ಜಾರ್ಖಂಡ್‌ನಲ್ಲಿ ಕ್ರಿಕೆಟ್ ಅಕಾಡೆಮಿ ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿರುವುದಾಗಿ ಬಹಿರಂಗಪಡಿಸಿದರು.