ಹೈದರಾಬಾದ್: ಪಾಕಿಸ್ತಾನ ಕ್ರಿಕೆಟ್ನ ಮಾಜಿ ಆಟಗಾರರಾದ ಶೋಯೆಬ್ ಅಖ್ತರ್ ಮತ್ತು ಶಾಹಿದ್ ಅಫ್ರಿದಿ ಭಾರತ ಕ್ರಿಕೆಟ್ ತಂಡದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
- " class="align-text-top noRightClick twitterSection" data="">
2019 ಐಸಿಸಿ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ನೀರಸ ಪ್ರದರ್ಶನ ತೋರುತ್ತಿರುವ ಪಾಕಿಸ್ತಾನ ತಂಡದ ವಿರುದ್ಧ ಭಾರೀ ಟೀಕೆಗಳು ಕೇಳಿ ಬರುತ್ತಿದ್ದು, ಸ್ವತಃ ಪಾಕ್ ಮಾಜಿ ಆಟಗಾರರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಶೋಯೆಬ್ ಅಖ್ತರ್ ಯೂಟ್ಯೂಬ್ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಮಾತನಾಡಿರುವ ಶಾಹಿದ್ ಅಫ್ರಿದಿ ಟೀಂ ಇಂಡಿಯಾವನ್ನ ಹೊಗಳಿದ್ದಾರೆ. ಭಾರತ ತಂಡದ ಪ್ರತಿಯೊಬ್ಬ ಆಟಗಾರರೂ ಆತ್ಮ ವಿಶ್ವಾಸದಿಂದ ಆಡುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಭಾರತ ಅದ್ಭುತ ಪ್ರದರ್ಶನ ತೋರುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ದ್ರಾವಿಡ್ ಗುಣಗಾನ:
ಭಾರತದಲ್ಲಿ ರಾಹುಲ್ ದ್ರಾವಿಡ್ ಅವರಂತ ಅನುಭವಿ ಆಟಗಾರರನ್ನ ಅಂಡರ್-19 ತಂಡಕ್ಕೆ ತರಬೇತುದಾರನಾಗಿ ನೇಮಿಸಿದ್ದಾರೆ. ಅವರು ಉತ್ತಮವಾಗಿ ಆಟಗಾರರನ್ನ ತಯಾರು ಮಾಡುತ್ತಿದ್ದಾರೆ. ನಮ್ಮಲ್ಲೂ ಅನುಭವಿ ಆಟಗಾರರಿದ್ದಾರೆ, ಆದರೂ ಇಂಥಾ ಕೆಲಸಗಳು ಆಗುತ್ತಿಲ್ಲ, ಅದಕ್ಕೆ ನಮ್ಮ ತಂಡದ ಸ್ಥಿತಿ ಹೀಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇನ್ನು ಸೆಮಿಫೈನಲ್ ಮತ್ತು ಫೈನಲ್ ತಲುಪುವ ತಂಡಗಳು ಯಾವುವು ಎಂದು ಅಖ್ತರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಫ್ರಿದಿ, ಭಾರತ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಇಂಗ್ಲೆಂಡ್ ತಂಡಗಳು ಸೆಮಿಫೈನಲ್ ತಲುಪುತ್ತವೆ. ಅಂತಿಮವಾಗಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ನಲ್ಲಿ ಮುಖಾಮುಖಿಯಾಗುತ್ತವೆ ಎಂದು ಭವಿಷ್ಯ ನುಡಿದಿದ್ದಾರೆ.
ಸೌಜನ್ಯಕ್ಕಾದರೂ ಪಾಕ್ ಹೆಸರೇಳದ ಅಫ್ರಿದಿ:
ಸೆಮಿಫೈನಲ್ ಮತ್ತು ಫೈನಲ್ ತಲುಪುವ ತಂಡಗಳ ಹೆಸರನ್ನ ಸೂಚಿಸಿದ ಅಫ್ರಿದಿ, ಸೌಜನ್ಯಕ್ಕಾದರೂ ಪಾಕಿಸ್ತಾನ ತಂಡದ ಹೆಸರೇಳದೆ, ತವರಿನ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೆ ಮಾಜಿ ಆಟಗಾರ ಕಮ್ರಾನ್ ಅಕ್ಮಲ್ ಕೂಡ ಪಾಕ್ ತಂಡದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ವಿಶ್ವಕಪ್ ಟೂರ್ನಿಯಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ತಂಡದ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದರು.