ಕರಾಚಿ: ಬದ್ದ ವೈರಿಗಳೆಂದೇ ಕರೆಯಲ್ಪಡುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇಡೀ ವಿಶ್ವವೇ ಕಾತರದಿಂದ ಕಾಯುತ್ತಿರುತ್ತದೆ. ವಿಶ್ವಕಪ್ ಇತಿಹಾಸದಲ್ಲೇ ಭಾತರ ತಂಡ ಪಾಕಿಸ್ತಾನದ ವಿರುದ್ಧ ಎಂದೂ ಸೋತಿಲ್ಲ. ಆದರೆ, ಈ ಬಾರಿ ಪಾಕ್ ಭಾರತ ತಂಡವನ್ನ ಸೋಲಿಸುತ್ತದೆ ಎಂದು ಪಾಕ್ ಕ್ರಿಕೆಟ್ ಟೀಂ ಸೆಲೆಕ್ಟರ್ ಮತ್ತು ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜೂನ್ 16 ರಂದು ಮ್ಯಾಂಚೆಸ್ಟರ್ನಲ್ಲಿ ನಡೆಯುವ ಪಂದ್ಯಕ್ಕಾಗಿ ಎಲ್ಲರೂ ಎದುರು ನೋಡುತ್ತಿದ್ದಾರೆ. ಈ ಪಂದ್ಯವನ್ನ ಪ್ರತಿಯೊಬ್ಬರೂ ಗಂಭೀರವಾಗಿ ಪರಿಗಣಿಸುತ್ತಾರೆ. ಕೆಲವರು ವಿಶ್ವಕಪ್ ಬೇಡ, ಭಾರತದ ವಿರುದ್ಧ ಗೆದ್ದರೇ ಸಾಕು ಎಂದು ಯೋಚಿಸಿರುತ್ತಾರೆ ಎಂದು ಇಂಜಮಾಮ್ ಹೇಳಿದ್ದಾರೆ.
ಭಾರತದ ವಿರುದ್ಧ ವಿಶ್ವಕಪ್ನಲ್ಲಿ ಗೆದ್ದೇ ಇಲ್ಲ ಎಂಬ ಅಪವಾದವನ್ನ ನಾವು ಈ ಬಾರಿ ಮೆಟ್ಟಿ ನಿಲ್ಲಲಿದ್ದೇವೆ. ಭಾರತ ಮಾತ್ರವಷ್ಟೇ ಅಲ್ಲ ಎಲ್ಲಾ ತಂಡಗಳನ್ನೂ ಪಾಕ್ ಮಣಿಸಲಿದೆ. ಯಾವುದೇ ತಂಡವನ್ನ ಕೇವಲವಾಗಿ ಕಾಣಬಾರದು. ಅದು ಆಫ್ಘಾನಿಸ್ತಾನವೇ ಆಗಲಿ ಇಂಗ್ಲೆಂಡ್ ಆಗಲಿ ಉತ್ತಮ ಪ್ರದರ್ಶನ ನೀಡಿದ್ರೇ ಮಾತ್ರ ಗೆಲ್ಲಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಆಫ್ಘಾನಿಸ್ತಾನದ ವಿರುದ್ಧ ನಡೆದ ಅಭ್ಯಾಸ ಪಂದ್ಯದಲ್ಲಿ ಪಾಕಿಸ್ತಾನ ತಂಡ 3 ವಿಕೆಟ್ಗಳ ಅಂತರದಿಂದ ಸೋಲು ಕಂಡಿದೆ. ಇದೇ 30 ರಿಂದ ವಿಶ್ವಕಪ್‌ಗೆ ಚಾಲನೆ ಸಿಗಲಿದೆ. ಅವತ್ತು ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡ ಮುಖಾಮುಖಿಯಾಗಲಿವೆ.