ಮ್ಯಾಂಚೆಸ್ಟರ್: ಕೆರಿಬಿಯನ್ನರ ಎದುರಿಸೋದಕ್ಕೆ ಟೀಂ ಇಂಡಿಯಾ ಸಾಕಷ್ಟು ತಯಾರಿ ನಡೆಸಿದೆ. ನಾಳೆ ಏನಾದರೂ ಪಂದ್ಯ ಗೆದ್ರೇ ಅಂತಿಮ ನಾಲ್ಕರಘಟ್ಟಕ್ಕೆ ಆಯ್ಕೆ ಆಗುವುದು ಪಕ್ಕಾ. ಆದರೆ, ರನ್ ಬರ ಎದುರಿಸುತ್ತಿರುವ ಮಹೇಂದ್ರ ಸಿಂಗ್ ಧೋನಿ ನೆಟ್ಸ್‌ನಲ್ಲಿ ನಿನ್ನೆ ಕಾಣಿಸಿಕೊಳ್ಳಲೇ ಇಲ್ಲ. ಆದರೆ, ಕೊಹ್ಲಿ ಮಾತ್ರ ಹಾಗೇ ಮಾಡಲಿಲ್ಲ. ಭುವಿ ಆಯ್ಕೆ ಇನ್ನೂ ಅಸ್ಪಷ್ಟವಾದಂತಿದೆ.
ನೆಟ್ಸ್ ಪ್ರಾಕ್ಟೀಸ್‌ನಲ್ಲಿ ನಾಲ್ಕೇ ನಾಲ್ಕು ಆಟಗಾರರು ಕಾಣಿಸಿದರು!
ನಿನ್ನೆ ಬೆಳಗ್ಗೆಯಿಂದಲೇ ಓಲ್ಡ್ ಟ್ರಾಫೋರ್ಡ್‌ನಲ್ಲಿ ಮಳೆಯ ಆಟ. ಔಟ್‌ಫೀಲ್ಡ್ ಒದ್ದೆಯಾಗಿದ್ರಿಂದಾಗಿ ಒಳಾಂಗಣದಲ್ಲಿ ನೆಟ್ಸ್ ಪ್ರಾಕ್ಟೀಸ್ ಮಾಡಿದೆ ಟೀಂ ಇಂಡಿಯಾ. ಆಟಗಾರರಿಗೆ ಪ್ರಾಕ್ಟೀಸ್ ಸೆಷನ್‌ಗೆ ಬರಬೇಕಾದ ಕಡ್ಡಾಯ ಅಂತಾ ಟೀಂ ಮ್ಯಾನೇಜ್‌ಮೆಂಟ್ ಹೇಳಿರಲಿಲ್ಲ. ಹಾಗಾಗಿಯೇ ಕ್ಯಾಪ್ಟನ್ ಕೊಹ್ಲಿ, ವಿಜಯ ಶಂಕರ್, ರವೀಂದ್ರ ಜಡೇಜಾ ಹಾಗೂ ಭುವಿನೇಶ್ವರಕುಮಾರ್ ಈ ನಾಲ್ವರು ಮಾತ್ರ ನೆಟ್ಸ್ ಪ್ರಾಕ್ಟೀಸ್ ನಡೆಸಿದರು. ಆದರೆ, ಧೋನಿ ಮಾತ್ರ ನಿನ್ನೆ ಕಾಣಿಸಿಕೊಳ್ಳಲೇ ಇಲ್ಲ. ಕಳೆದ 48 ಗಂಟೆಗಳಲ್ಲಿ ಮಾಹಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆಪ್ಘಾನಿಸ್ತಾನದ ವಿರುದ್ಧ ನಿಧಾನಗತಿಯ ಬ್ಯಾಟಿಂಗ್ ನಡೆಸಿ ಟೀಕೆಗೊಳಗಾಗಿದ್ದಾರೆ. ಸಚಿನ್ ಅಸಮಾಧಾನ ವ್ಯಕ್ತಪಡಿಸಿದ ಮೇಲೆ ಅದಕ್ಕೆ ಧೋನಿ ಫ್ಯಾನ್ಸ್ ಕೂಡ ಕ್ರಿಕೆಟ್ ದೇವರಿಗೆ ತಿರುಗೇಟು ನೀಡಿದ್ದರು.

ನಿರಾಶಾದಾಯಕ ಪರ್ಫಾಮೆನ್ಸ್ ಮಧ್ಯೆಯೂ ನೆಟ್ಸ್‌ನಲ್ಲಿ ಕಾಣದ ಮಾಹಿ!
ವಿಶ್ವಕಪ್‌ನಲ್ಲಿ ಧೋನಿ ಈವರೆಗೂ ನಿರಾಶಾದಾಯಕ ಆಟ ಪ್ರದರ್ಶಿಸಿದ್ದಾರೆ. ನಾಲ್ಕು ಪಂದ್ಯಗಳಲ್ಲಿ ಬರೀ 90 ರನ್ ಗಳಿಸಿದ್ದಾರೆ. ಕೀಪಿಂಗ್‌ನಲ್ಲಿ 2 ಕ್ಯಾಚ್ ಪಡೆದ್ರೇ ಒಂದು ಸ್ಟಂಪಿಂಗ್ ಮಾಡಿದ್ದಾರೆ. ಇಷ್ಟಿದ್ರೂ ಅವರು ನೆಟ್ಸ್‌ನಲ್ಲಿ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿಲ್ಲ. ಆದರೆ, ಕ್ಯಾಪ್ಟನ್ ಕೊಹ್ಲಿ ಮಾತ್ರ ಈ ವಿಷ್ಯದಲ್ಲಿ ಹಿಂದೆ ಬಿದ್ದಿಲ್ಲ. ಈಯವರೆಗೂ ನೆಟ್ಸ್ ಪ್ರಾಕ್ಟೀಸ್ ಕಡೆ ಫೋಕಸ್ ಮಾಡಿದ್ದಾರೆ ವಿರಾಟ್.

ಹೆಚ್ಚು ಸಮಯ ಕ್ರೀಸ್‌ನಲ್ಲಿದ್ದು, ಗರಿಷ್ಠ ರನ್ ಗಳಿಸಲು ಕೊಹ್ಲಿ ಚಿತ್ತ!
ತನ್ನ ಸಮಕಾಲೀನ ಬ್ಯಾಟ್ಸ್‌ಮೆನ್‌ಗಳಾದ ರೂಟ್, ವಿಲಿಯಂಸನ್ ಹಾಗೂ ಸ್ಮಿತ್ ವಿಶ್ವಕಪ್‌ನಲ್ಲಿ ಶತಕ ಭಾರಿಸಿದ್ದಾರೆ. ಆದರೆ, ಕಿಂಗ್ ಕೊಹ್ಲಿಗೆ ಮಹಾ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿಲ್ಲ. 4 ಪಂದ್ಯಗಳಿಂದ 244 ರನ್ ಗಳಿಸಿರುವ ಕ್ಯಾಪ್ಟನ್ ಕೊಹ್ಲಿ ಬ್ಯಾಟಿಂಗ್ ಕಡಿಮೆಯೇನಲ್ಲ. ಆದರೆ, ಜಗದ್ವಿಖ್ಯಾತ ದಿಲ್ಲಿವಾಲಾ ಯಾವತ್ತೂ ಹೈ ಸ್ಟ್ಯಾಂಡರ್ಸ್ ಗುರಿ ಹೊಂದಿರುವ ಬ್ಯಾಟ್ಸ್‌ಮೆನ್. ಹೆಚ್ಚೆಚ್ಚು ರನ್ ಮಳೆ ಹರಿಸಿದ್ರೇ ಮಾತ್ರವೇ ಕೊಹ್ಲಿಗೆ ಖುಷಿ. ನಿನ್ನೆ ನೆಟ್ಸ್ ಪ್ರಾಕ್ಟೀಸ್‌ಗೂ ಮೊದಲೇ ಕೋಚ್ ರವಿಶಾಸ್ತ್ರಿ ಬಳಿ ಸುದೀರ್ಘ ಚರ್ಚೆ ನಡೆಸಿದ್ದಾರೆ ಕೊಹ್ಲಿ. ಜತೆಗೆ ಬ್ಯಾಟಿಂಗ್ ತರಬೇತುದಾರ ಸಂಜಯ್ ಬಂಗಾರ ಬಳಿಯೂ ಕೆಲ ಉಪಯುಕ್ತ ಟಿಪ್ಸ್ ಪಡೆದಿದ್ದರು. ಆ ಬಳಿಕವಷ್ಟೇ ಆಟೋಮೇಟೆಡ್ ಬೌಲಿಂಗ್ ಮಷಿನ್‌ನಿಂದ ಬ್ಯಾಟಿಂಗ್ ಪ್ರಾಕ್ಟೀಸ್ ನಡೆಸಿದರು. ಅಷ್ಟೇ ಅಲ್ಲ, ಕೊಹ್ಲಿ ಜಿಮ್‌ನಲ್ಲೂ ನಿತ್ಯ ಬೆವರು ಹರಿಸುತ್ತಾರೆ.
ಕಂಪ್ಲೀಟ್ ಫಿಟಾದ್ರೆ ಭುವಿಗೆ ಚಾನ್ಸ್, ಇಲ್ಲದಿದ್ರೇ ರಿಸ್ಕ್ ತೆಗೆದುಕೊಳ್ಳಲ್ಲ!
ಭುವನೇಶ್ವರಕುಮಾರ್ ಮತ್ತೆ ಬೌಲಿಂಗ್ ಮಾಡಲು ಫಿಟ್ ಆದಂತಿದೆ. ಮೀಡಿಯಂ ಪೇಸ್ ಬೌಲರ್ ಭುವಿ ಒಳಾಂಗಣ ನೆಟ್ಸ್‌ನಲ್ಲಿ ಕೆಲ ಹೊತ್ತು ಬೌಲಿಂಗ್ ಮಾಡಿದರು. ಫಿಸಿಯೋ ಪ್ಯಾಟ್ರಿಕ್ ಫರಹಾತ್ ಭುವಿ ಬೌಲಿಂಗ್ ಮಾಡುವಾಗ ಅವರ ಪ್ರತಿ ನಡೆ ಗಮನಿಸಿದರು. ಪ್ರತಿ ಬಾಲ್ ಎಸೆದಾಗಲೂ ಭುವಿ ಜತೆಗೆ ಚರ್ಚಿಸಿದರು, ಕೆಲ ಸಲಹೆಗಳನ್ನ ನೀಡಿದರು. ಇದಾದ ಮೇಲೆ ಆಯ್ಕೆ ಮಂಡಳಿ ಅಧ್ಯಕ್ಷ ಎಂಎಸ್‌ಕೆ ಪ್ರಸಾದ್‌ಗೆ ಭುವಿ ಫಿಟ್‌ನೆಸ್ ಕುರಿತಂತೆ ಪ್ಯಾಟ್ರಿಕ್ ಫರಹಾತ್ ಅಪ್‌ಡೇಟ್ ಕೊಟ್ಟರು. ಬೌಲಿಂಗ್ ಕೋಚ್ ಭಾರತ ಅರುಣ್ ಸಹ ಭುವಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವ ವೇಳೆ ಇದ್ದರು. ಪ್ರಾಕ್ಟೀಸ್ ವೇಳೆ ಮತ್ತೆ ಗಾಯದ ಸಮಸ್ಯೆ ತಲೆದೋರಿದ್ರೇ, ಮಧ್ಯಮ ವೇಗದ ಬೌಲರ್‌ನ ನಾಳೆ ವಿಂಡೀಸ್ ವಿರುದ್ಧದ ಪಂದ್ಯಕ್ಕೆ ಆಯ್ಕೆ ಮಾಡದಿರಲು ಬಿಸಿಸಿಐ ಆಡಳಿತ ಮಂಡಳಿ ನಿರ್ಧರಿಸಿದೆ.