ಲಂಡನ್: ಕ್ರಿಕೆಟ್ ಹಬ್ಬ ವಿಶ್ವಕಪ್ ಟೂರ್ನಮೆಂಟ್ಗೆ ಕೇವಲ 3 ದಿನ ಮಾತ್ರ ಬಾಕಿ ಇದ್ದು, ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಟೀಂ ಇಂಡಿಯಾ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು ಈ ಬಾರಿ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸದಲ್ಲಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡ ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಕಳೆದ ಕೆಲ ವರ್ಷಗಳಿಂದ ಉತ್ತಮ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ತೋರಿದ್ರೆ ಭಾರತ ತಂಡಕ್ಕೆ ಗೆಲುವು ಪಕ್ಕಾ. ವಿರಾಟ್ ಕೊಹ್ಲಿ ಬ್ಯಾಟ್ ಬೀಸುವ ರಭಸಕ್ಕೆ ಅನೇಕ ದಾಖಲೆಗಳು ಧೂಳಿಪಟವಾಗಿದ್ದು, ಯಾವ ದಾಖಲೆಗಳು ಕೊಹ್ಲಿ ಮುಂದೆ ನಿಲ್ಲಲಾರವು. ಎಂಥಾ ಸಮಯದಲ್ಲಾದರೂ ಏಕಾಂಗಿಯಾಗಿ ತಂಡವನ್ನ ಗೆಲ್ಲಿಸುವ ಶಕ್ತಿ ವಿರಾಟ್ ಕೊಹ್ಲಿಗಿದೆ.
ಈ ಬಾರಿ ಟೀಂ ಇಂಡಿಯಾ ನಾಯಕನಾಗಿ ತಂಡವನ್ನ ಮುನ್ನಡೆಸುತ್ತಿರುವ ಕೊಹ್ಲಿ ಮಹೇಲ್ ಜಯವರ್ಧನೆ ದಾಖಲೆ ಬ್ರೇಕ್ ಮಾಡ್ತಾರಾ ಎಂಬ ಕುತೂಹಲ ಮನೆ ಮಾಡಿದೆ. 2007ರ ವಿಶ್ವಕಪ್ ಟೂರ್ನಮೆಂಟ್ನಲ್ಲಿ ಶ್ರೀಲಂಕಾ ತಂಡದ ನಾಯಕನಾಗಿದ್ದ ಜಯವರ್ಧನೆ 60.88 ಸರಾಸರಿಯಲ್ಲಿ ಒಟ್ಟು 548 ರನ್ ಗಳಿಸಿದ್ದರು. ಇದು ವಿಶ್ವಕಪ್ ಟೂರ್ನಿಯಲ್ಲಿ ತಂಡದ ನಾಯಕ ಗಳಿಸಿದ ಅತಿ ಹೆಚ್ಚು ರನ್ ಎಂಬ ದಾಖಲೆಯಾಗಿದೆ. ಇದೇ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾಗಿದ್ದ ರಿಕಿ ಪಾಂಟಿಂಗ್ 539 ರನ್ ಗಳಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ.
ಭರ್ಜರಿ ಫಾರ್ಮ್ನಲ್ಲಿರುವ ವಿರಾಟ್ ಈ ಬಾರಿ ಜಯವರ್ಧನೆ ಹೆಸರಲ್ಲಿರುವ ದಾಖಲೆಯನ್ನ ಬ್ರೇಕ್ ಮಾಡ್ತಾರಾ? ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.