ಹೈದರಾಬಾದ್: ಈ ಹಿಂದಿನ ಐಪಿಎಲ್ಗಳಂತೆ 13ನೇ ಆವೃತ್ತಿಯೂ ಹಲವು ಯುವ ಪ್ರತಿಭೆಗಳ ಅನಾವರಣಕ್ಕೆ ಸಾಕ್ಷಿಯಾಗಿದೆ. ಟಿ20 ಲೀಗ್ನಲ್ಲಿ ಈ ಹಿಂದೆ ಕೆಲವು ಯುವ ಕ್ರಿಕೆಟಿಗರು ತಮ್ಮನ್ನು ತಾವೂ ಗುರುತಿಸಿಕೊಳ್ಳಲು ಈ ವೇದಿಕೆಯನ್ನು ಬಳಸಿಕೊಂಡಿದ್ದಾರೆ. ಆದರೆ, ಈ ಬಾರಿ ಮಾತ್ರ ಅಪರಿಚಿತರಾಗಿ ಐಪಿಎಲ್ನಲ್ಲಿ ಕಣಕ್ಕಿಳಿದಿದ್ದ ಕೆಲವು ಪ್ರತಿಭೆಗಳು ಆ ತಂಡದ ಗೇಮ್ ಚೇಂಜರ್ಗಳಾಗಿದ್ದಾರೆ ಎನ್ನುವುದು ವಿಶೇಷ.
13ನೇ ಆವೃತ್ತಿಯಲ್ಲಿ ಜೀರೋಗಳಾಗಿ ಬಂದು ಕೊನೆಯ ಲೀಗ್ ಪಂದ್ಯದ ಹೊತ್ತಿಗೆ ಹೀರೋಗಳಾಗಿ ಮಿಂಚುತ್ತಿರುವ ಕೆಲವು ಆಟಗಾರರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ.
ದೇವದತ್ ಪಡಿಕ್ಕಲ್
20 ವರ್ಷದ ಯುವ ದೇವದತ್ ಪಡಿಕ್ಕಲ್ ಈ ಆವೃತ್ತಿಯಲ್ಲಿ 472 ರನ್ಗಳಿಸುವ ಮೂಲಕ ಪದಾರ್ಪಣೆ ಲೀಗ್ನಲ್ಲಿ ಗರಿಷ್ಠ ರನ್ಗಳಿಸಿದ ಭಾರತೀಯ ಅನ್ಕ್ಯಾಪ್ಡ್ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಇವರು 14 ಪಂದ್ಯಗಳಿಂದ 5 ಅರ್ಧಶತಕ ಸಹಿತ 125 ಸ್ಟ್ರೈಕ್ರೇಟ್ನಲ್ಲಿ ರನ್ಗಳಿಸಿದ್ದಾರೆ.
ಅವರ ಇನ್ನಿಂಗ್ಸ್ನಲ್ಲಿ 51 ಬೌಂಡರಿ ಹಾಗೂ 8 ಸಿಕ್ಸರ್ಸ್ ಸೇರಿವೆ. ದೇವದತ್ ಆರ್ಸಿಬಿ ಹಲವು ವರ್ಷಗಳಿಂದ ಹುಡುಕುತ್ತಿದ್ದ ಆರಂಭಿಕ ಬ್ಯಾಟ್ಸ್ಮನ್ ಸ್ಥಾನಕ್ಕೆ ಹೇಳಿ ಮಾಡಿಸಿದ ಆಟಗಾರನಾಗಿದ್ದಾರೆ. ಅವರು ಆರ್ಸಿಬಿ ಪರ ಗರಿಷ್ಠ ಹಾಗೂ ಐಪಿಎಲ್ನಲ್ಲಿ 3ನೇ ಗರಿಷ್ಠ ರನ್ ಸ್ಕೋರರ್ ಆಗಿ ಮಿಂಚುತ್ತಿದ್ದಾರೆ.
ರಾಹುಲ್ ತೆವಾಟಿಯಾ
2020ರ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಕೊನೆಯ ಸ್ಥಾನಿಯಾಗಿ ಟೂರ್ನಿಯನ್ನು ಮುಗಿಸಿದೆ. ಆದರೆ, ಈ ತಂಡದಲ್ಲಿ ಕೆಲವು ಉದಯೋನ್ಮುಖ ಪ್ರತಿಭೆಗಳು ಹೊರ ಬಂದಿವೆ. ಅದರಲ್ಲೂ ಶೆಲ್ಡಾನ್ ಕಾಟ್ರೆಲ್ಗೆ ಒಂದೇ ಓವರ್ನಲ್ಲಿ 5 ಸಿಕ್ಸರ್ ಸಿಡಿಸಿದ ನಂತರ ರಾಹುಲ್ ತೆವಾಟಿಯಾ ಹೆಸರು ಮಾತ್ರ ವಿಶ್ವ ವೇದಿಕೆಯಲ್ಲಿ ಚರ್ಚೆಗೊಳ್ಳುತ್ತಿದೆ.
ಆಲ್ರೌಂಡರ್ ಆಗಿರುವ ತೆವಾಟಿಯಾ ಟೂರ್ನಿಯಲ್ಲಿ 11 ಇನ್ನಿಂಗ್ಸ್ಗಳಿಂದ 255 ರನ್ ಹಾಗೂ 10 ವಿಕೆಟ್ ಪಡೆದಿದ್ದಾರೆ.
ರವಿ ಬಿಷ್ಣೋಯ್
ಲೆಗ್ ಸ್ಪಿನ್ನರ್ ಆಗಿರುವ ರವಿ ಬಿಷ್ಣೋಯ್ 2019ರ ಅಂಡರ್ 19 ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್(17) ಪಡೆದ ಬೌಲರ್ ಆಗಿದ್ದರು. ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ಕಳೆದ ಐಪಿಎಲ್ ಹರಾಜಿನಲ್ಲಿ ಖರೀದಿಸಿತ್ತು. ಅವರು ತಮ್ಮ ಐಪಿಎಲ್ ಪದಾರ್ಪಣೆ ಆವೃತ್ತಿಯಲ್ಲೇ 14 ಇನ್ನಿಂಗ್ಸ್ಗಳಿಂದ 12 ವಿಕೆಟ್ ಪಡೆದು ಮಿಂಚಿದ್ದಾರೆ. ಅದ್ಭುತ ಪ್ರದರ್ಶನದ ಮೂಲಕ ತಾವೂ ಭಾರತದ ಭವಿಷ್ಯದ ತಾರೆ ಎಂದು ನಿರೂಪಿಸಿದ್ದಾರೆ.
ಈ ಟೂರ್ನಿಯಲ್ಲಿ ರವಿ ಬಿಷ್ಣೋಯ್ ಡೇವಿಡ್ ವಾರ್ನರ್, ಜಾನಿ ಬೈರ್ಸ್ಟೋವ್, ರಿಷಭ್ ಪಂತ್, ಫಿಂಚ್, ಇಯಾನ್ ಮಾರ್ಗನ್, ಸೇರಿದಂತೆ ಕೆಲವು ಟಾಪ್ ಬ್ಯಾಟ್ಸ್ಮನ್ಗಳಿಗೆ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಕೋಚ್ ಅನಿಲ್ ಕುಂಬ್ಳೆ ಬೌಲಿಂಗ್ ಶೈಲಿಯನ್ನು ಹೊಂದಿರುವ ಆತ ಫ್ಲಿಪ್ಪರ್ಸ್, ಟಾಪ್ ಸ್ಪಿನ್ನರ್ಸ್ ಮತ್ತು ಪರಿಣಾಮಕಾರಿ ಗೂಗ್ಲಿಗಳನ್ನು ಎಸೆಯುವ ಸಾಮರ್ಥ್ಯ ಹೊಂದಿದ್ದಾರೆ.
ಟಿ ನಟರಾಜನ್
ತಮಿಳುನಾಡಿನ ಕುಗ್ರಾಮದಿಂದ ಬಂದಿದ್ದ ಟಿ ನಟರಾಜನ್ ಐಪಿಎಲ್ನಲ್ಲಿ ಅತಿ ಹೆಚ್ಚು ಯಾರ್ಕರ್ ಪ್ರಯೋಗಿಸಿರುವ ಬೌಲರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಎಡ ಗೈ ವೇಗಿಯಾಗಿರುವ ಈತ ಭುವನೇಶ್ವರ್ ಅನುಪಸ್ಥಿತಿ ಹೈದರಾಬಾದ್ ತಂಡಕ್ಕೆ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ. 29 ವರ್ಷ ವೇಗಿ 13 ಪಂದ್ಯಗಳಿಂದ 14 ವಿಕೆಟ್ ಪಡೆದು ಮಿಂಚುತ್ತಿದ್ದಾರೆ.
ರುತುರಾಜ್ ಗಾಯಕ್ವಾಡ್
ಐಪಿಎಲ್ನ ಯಶಸ್ವಿ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಕೆಟ್ಟ ಪ್ರದರ್ಶನದ ಮೂಲಕ ಟೂರ್ನಿಯಲ್ಲಿ 7ನೇ ಸ್ಥಾನಿಯಾಗಿ ಹೊರಬಿದ್ದಿದೆ. ಆದರೆ, ಈ ತಂಡದ ರುತುರಾಜ್ ಗಾಯಕ್ವಾಡ್ ಕೊನೆಯ ಮೂರು ಪಂದ್ಯಗಳಲ್ಲಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಇವರು ಮೊದಲ 3 ಪಂದ್ಯದಲ್ಲಿ 5 ರನ್ಗಳಿಸಿದ್ದರೆ, ಕೊನೆಯ 3 ಪಂದ್ಯಗಳಲ್ಲಿ 199 ರನ್ಗಳಿಸುವ ಮೂಲಕ ಮಿಂಚಿದ್ದರು. ಸೋತು ಸುಣ್ಣವಾಗಿದ್ದ ಸಿಎಸ್ಕೆ ಗೌರವಯುತವಾಗಿ ಟೂರ್ನಿಯಿಂದ ಹೊರಬರಲು ರುತುರಾಜ್ ಗಾಯಕ್ವಾಡ್ ಕಾರಣರಾದರು. ಧೋನಿಯಿಂದಲೇ ತೆಗೆಳಿಕೆಗೆ ಗುರಿಯಾಗಿದ್ದ ಅವರು ಕೊನೆಗೆ ಧೋನಿಯಿಂದಲೇ ಶಹಬ್ಬಾಶ್ ಗಿರಿ ಪಡೆದುಕೊಂಡಿದ್ದರು.
ವರುಣ್ ಚಕ್ರವರ್ತಿ
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯಶಸ್ಸಿ ಬೌಲರ್ಗಳಲ್ಲಿ ಒಬ್ಬರಾಗಿರುವ ವರುಣ್ ಚಕ್ರವರ್ತಿ, ಇಂದು ಆ ತಂಡ ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಳ್ಳಲು ಪ್ರಮುಖ ಕಾರಣವಾಗಿದ್ದಾರೆ. ಅವರು 13 ಪಂದ್ಯಗಳಿಂದ 17 ವಿಕೆಟ್ ಪಡೆದು ಬಾರಿ ಸುದ್ದಿಯಾಗಿದ್ದಲ್ಲದೆ ಆಸ್ಟ್ರೇಲಿಯಾ ಪ್ರವಾಸಕ್ಕೂ ಭಾರತ ತಂಡದ ಟಿ20 ತಂಡದಲ್ಲಿ ಅವಕಾಶಗಿಟ್ಟಿಸಿಕೊಂಡಿದ್ದಾರೆ.
ಇವರಲ್ಲದೆ ಅರ್ಶ್ದೀಪ್ ಸಿಂಗ್, ಕಾರ್ತಿಕ್ ತ್ಯಾಗಿ, ತುಷಾರ್ ದೇಶಪಾಂಡೆ, ಪ್ರಿಯಂ ಗರ್ಗ್, ಅಬ್ದುಲ್ ಸಮದ್ ಹೀಗೆ ಹಲವಾರು ಯುವ ಪ್ರತಿಭೆಗಳು ಯುಎಇನಲ್ಲಿ ನಡೆಯುತ್ತಿರುವ ಟೂರ್ನಿಯಲ್ಲಿ ತಮ್ಮ ಪ್ರದರ್ಶನದ ಮೂಲಕ ಕ್ರಿಕೆಟ್ ಪಂಡಿತರಿಂದ ಮೆಚ್ಚುಗೆ ಪಡೆದಿದ್ದಾರೆ.