ನವದೆಹಲಿ: 2018ರ ಯೂತ್ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಕುಸ್ತಿಪಟು ಸಿಮ್ರಾನ್ , ಅಂದು ದೆಹಲಿ ಸರ್ಕಾರದ ಆರೋಗ್ಯ ಸಚಿವಾ ಸತ್ಯೇಂದ್ರ ಜೈನ್ ಘೋಷಣೆ ಮಾಡಿದ್ದ ಬಹುಮಾನ ಮೊತ್ತ ಇನ್ನು ಬಾರದ ಕಾರಣ ತಮ್ಮ ತರಬೇತಿ ಆರಂಭಿಸಲು ಸಾಧ್ಯವಾಗುತ್ತಿಲ್ಲೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
2018ರ ಬ್ಯೂನಸ್ ಐರಿಸ್ ಯೂತ್ ಒಲಿಂಪಿಕ್ಸ್ನಲ್ಲಿ ಸಿಮ್ರಾನ್ ಭಾರತಕ್ಕೆ ಬೆಳ್ಳಿಪದಕ ತಂದುಕೊಟ್ಟಿದ್ದರು. ನಂತರದ ಟೂರ್ನಿಗಳಲ್ಲಿ 2 ಚಿನ್ನದ ಪದಕ ಮತ್ತು ಒಂದು ಕಂಚನ್ನು ಕೂಡ ಗೆದ್ದಿದ್ದರು.
ಹಣಕಾಸಿನ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿರುವ ತನ್ನ ತರಬೇತಿಯನ್ನು ಪುನರಾರಂಭಿಸಲು ಸಿಮ್ರಾನ್ ಅವರು ದೆಹಲಿ ಸರ್ಕಾರ ತಮಗೆ ಭರವಸೆ ನೀಡಿದ್ದ ನಗದು ಬಹುಮಾನವನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ..
"ಯೂತ್ ಒಲಿಂಪಿಕ್ಸ್ನಲ್ಲಿ ಪದಕ ಗೆದ್ದ ಸಮಯದಲ್ಲಿ ಶ್ರೀ ಸತ್ಯೇಂದರ್ ಜೈನ್ ಅವರು ಸರ್ಕಾರದಿಂದ ನಗದು ಪ್ರಶಸ್ತಿ ನೀಡುವುದಾಗಿ ನನಗೆ ಭರವಸೆ ನೀಡಿದ್ದರು" ಎಂದು ಸಿಮ್ರಾನ್ ವೀಡಿಯೊದಲ್ಲಿ ಹೇಳಿದ್ದಾರೆ.
"ಆದರೆ ಎರಡು ವರ್ಷಗಳಾದರು ನನಗೆ ಯಾವುದೇ ಸಹಾಯ ದೊರೆಕಿಲ್ಲ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ಈ ಬಗ್ಗೆ ತಿಳಿಸಲು ನಾನು ಇಮೇಲ್ ಮೂಲಕ ಪ್ರಯತ್ನಿಸಿದೆ. ಆದರೆ ನನ್ನ ಇ-ಮೇಲ್ಗಳಿಗೆ ಯಾವುದೆ ಉತ್ತರ ಬಂದಿಲ್ಲ" ಎಂದು ಅವರು ಹೇಳಿಕೊಂಡಿದ್ದಾರೆ.
"ನನ್ನ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ನಾನು ನಿಯಮಿತವಾಗಿ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಅಭ್ಯಾಸವನ್ನು ಪುನರಾರಂಭಿಸಲು ಕ್ರೀಡಾ ಕೋಟಾದಿಂದ ನನ್ನ ನಗದು ಬಹುಮಾನವನ್ನು ಬಿಡುಗಡೆ ಮಾಡುವಂತೆ ನಾನು ದೆಹಲಿ ಸರ್ಕಾರಕ್ಕೆ ಮನವಿ ಮಾಡುತ್ತಿದ್ದೇನೆ." ಎಂದು ವಿಡಿಯೋದಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಿಮ್ರಾನ್ ಕೆಡೆಟ್ ಮಟ್ಟದಲ್ಲಿ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚು ಮತ್ತು 2017 ರ ಕೆಡೆಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಗೆದ್ದಿದ್ದಾರೆ.