ನವದೆಹಲಿ: ಪುರುಷರ ಐಪಿಎಲ್ ಈಗಾಗಲೆ ಟಿ20 ಲೀಗ್ಗಳಲ್ಲೇ ಅಗ್ರಸ್ಥಾನ ಪಡೆದಿದೆ, ಇದೀಗ ಮಹಿಳಾ ಐಪಿಎಲ್ ಕೂಡ ಪ್ರಗತಿ ಹಂತದಲ್ಲಿದ್ದು ಒಂದು ವಿಶ್ವಕಪ್ ಗೆದ್ದರೆ ಮಹಿಳಾ ಕ್ರಿಕೆಟ್ ಟರ್ನಿಂಗ್ ಪಾಯಿಂಟ್ ಆಗಲಿದೆ ಎಂದು ಭಾರತದ ಮಾಜಿ ನಾಯಕಿ ಅಂಜುಮ್ ಚೊಪ್ರಾ ತಿಳಿಸಿದ್ದಾರೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದಲ್ಲಿ ಇದೇ ವರ್ಷ ನಡೆದ ಟಿ-20 ವಿಶ್ವಕಪ್‌ನಲ್ಲಿ ಭಾರತ ಅಜೇಯವಾಗಿ ಫೈನಲ್ ಪ್ರವೇಶಿಸಿತ್ತಾದರೂ ಫೈನಲ್‌ನಲ್ಲಿ ಆತಿಥೇಯ ಆಸ್ಟ್ರೇ ಲಿಯಾ ಎದುರು ಮುಗ್ಗರಿಸಿ ನಿರಾಶೆಯನುಭವಿಸಿತ್ತು.
ಭಾರತದ ಮಹಿಳಾ ಕ್ರಿಕೆಟ್ನ ಶ್ರೇಷ್ಠ ಕ್ರಿಕೆಟಿಗೆಯಾದ ಚೊಪ್ರಾ ಪ್ರಕಾರ ಮಹಿಳಾ ತಂಡ ಒಂದು ವಿಶ್ವಕಪ್ ಟೈಟಲ್ ಮುಡಿಗೇರಿಸಿಕೊಂಡರೆ, ಕ್ರಿಕೆಟ್ ಮಹಿಳೆಯರ ಆಟವಾಗಿಯೂ ಕೂಡ ಭಾರತದಲ್ಲಿ ಬದಲಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಒಂದು ಪಂದ್ಯದಿಂದ ಶುರುವಾದ ಮಹಿಳಾ ಟಿ20 ಚಾಲೆಂಜ್ ಕಳೆದ ವರ್ಷ ನಾಲ್ಕಕ್ಕೇರಿತ್ತು. ಈ ವರ್ಷ 7 ಪಂದ್ಯಗಳಿಗೆ ಏರಿಕೆ ಕಂಡಿದೆ. ಇದು ಪ್ರಗತಿ ಹಂತವಾಗಿದೆ ಎಂದು ಚೊಪ್ರಾ ತಿಳಿಸಿದ್ದಾರೆ.
ಏನಾದರೂ ಭಾರತ ಮಹಿಳಾ ತಂಡ ವಿಶ್ವಕಪ್ ಗೆದ್ದರೆ ಐಪಿಎಲ್ ಪಂದ್ಯಗಳಲ್ಲಿ ಗಣನೀಯ ಏರಿಕೆಯಾಗಲಿದೆ. ರನ್ನರ್ಸ್ ಮತ್ತು ವಿನ್ನರ್ಸ್ ನಡುವೆ ತಂಬಾ ವ್ಯತ್ಯಾಸವಿದೆ ಎಂದಿದ್ದಾರೆ.
ಚೊಪ್ರಾ 17 ವರ್ಷಗಳ ಕಾಲ ಭಾರತ ತಂಡದ ಪರ ಆಡಿದ್ದು 6 ವಿಶ್ವಕಪ್ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಅವರು ಏಕದಿನ ಕ್ರಿಕೆಟ್ನಲ್ಲಿ 100 ಪಂದ್ಯಗಳನ್ನಾಡಿದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದರು.