ಮೈಸೂರು: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಹುದ್ದೆಗಾಗಿ ನಡೆದ ಸ್ಪರ್ಧೆಯಲ್ಲಿ ಜಯ ಕಾಣದಿದ್ದರೂ, ಮೈಕ್ ಹೆಸನ್ ಆ ಬಗ್ಗೆ ನಿರಾಸೆ ವ್ಯಕ್ತಪಡಿಸಿಲ್ಲ. ಬದಲಾಗಿ ಕೋಚ್ ಆಗಿ ಆಯ್ಕೆಯಾದ ರವಿಶಾಸ್ತ್ರಿ ಹಾಗೂ ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ.
ಮಾಜಿ ನಾಯಕ ಕಪಿಲ್ ದೇವ್ ನೇತೃತ್ವದ ಸಲಹಾ ಸಮಿತಿಯು 2021ರ ಟಿ-20 ವಿಶ್ವಕಪ್ ವರೆಗೆ ಭಾರತ ತಂಡದ ಕೋಚ್ ಆಗಲಿರುವ ಆರು ಮಂದಿ ಆಸಕ್ತರನ್ನು ಪಟ್ಟಿ ಮಾಡಿತ್ತು. ರವಿಶಾಸ್ತ್ರಿ, ರಾಬಿನ್ ಸಿಂಗ್, ಲಾಲ್ ಚಂದ್ ರಜಪೂತ್, ಟಾಮ್ ಮೂಡಿ, ಫಿಲ್ ಸಿಮನ್ಸ್ ಅವರೊಂದಿಗೆ ಹೆಸನ್ ಅವರ ಹೆಸರೂ ಸೇರಿತ್ತು.
ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯದ ವೇಳೆ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಹೆಸನ್, “ ಕೋಚ್ ಆಯ್ಕೆ ಪ್ರಕ್ರಿಯೆಯನ್ನು ಚೆನ್ನಾಗಿ ಗಮನಿಸಿದ್ದೇನೆ, ಪ್ರಕ್ರಿಯೆಯ ಬಗ್ಗೆ ನನಗೆ ಖುಷಿ ಇದೆ. ರವಿಶಾಸ್ತ್ರಿ ಹಾಗೂ ಅವರ ತಂಡಕ್ಕೆ ನಾನು ಒಳಿತಾಗಲಿ ಎಂದು ಈ ಮೂಲಕ ಶುಭ ಕೋರುತ್ತೇನೆ,” ಎಂದು ಮೈಸೂರಿನಲ್ಲಿ ವೀಕ್ಷಕ ವಿವರಣೆ ಕಾರ್ಯವನ್ನು ನಿಭಾಯಿಸುತ್ತಿರುವ ಹೆಸನ್ ಹೇಳಿದರು.
ಆಗಸ್ಟ್ 16ರಂದು ಫಿಲ್ ಸಿಮನ್ಸ್ ಸ್ಪರ್ಧೆಯಿಂದ ಹಿಂದೆ ಸರಿದ ನಂತರ, ಶಾಸ್ತ್ರಿ ಸ್ಪರ್ಧೆಯಲ್ಲಿರುವ ಇತರ ಐವರನ್ನು ಹಿಂದಿಕ್ಕಿ, ತನ್ನ ಗುತ್ತಿಗೆಯನ್ನು ಮುಂದುವರಿಸಿಕೊಂಡು ಹೋಗುವಲ್ಲಿ ಯಶಸ್ವಿಯಾದರು. ಕೆಲವು ದಿನಗಳ ಬಂದ ವರದಿಯ ಪ್ರಕಾರ ಕಿವೀಸ್ ಕೋಚ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಅನುಭವ ಹೊಂದಿರದ ಕಾರಣ ಕೋಚ್ ಹುದ್ದೆಗೆ ಅರ್ಹರಾಗಿಲ್ಲ ಎಂಬುದಾಗಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅನುಭವ ಹೊಂದಿರದ ಹೆಸನ್, 22ನೇ ವಯಸ್ಸಿನಲ್ಲಿ ಕ್ರಿಕೆಟ್ ಕೋಚಿಂಗ್ನಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅಲ್ಲಿಂದ ಇಲ್ಲಿಯವರೆಗೂ ಅವರಿಗೆ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಘನತೆ ಇದೆ. ಕೀನ್ಯಾ ತಂಡದ ಪರ ಅಲ್ಪ ಅವಧಿಗೆ ತರಬೇತುದಾರರಾದ ನಂತರ 2012ರಲ್ಲಿ ಜಾನ್ ರೈಟ್ ನಂತರ ನ್ಯೂಜಿಲ್ಯಾಂಡ್ ಕೋಚ್ ಆಗಿ ಕಾರ್ಯನಿರ್ವಹಿಸಿದರು. 2015ರಲ್ಲಿ ಮೊದಲ ಬಾರಿಗೆ ನ್ಯೂಜಿಲ್ಯಾಂಡ್ ತಂಡ ವಿಶ್ವಕಪ್ ಫೈನಲ್ ತಲಪುವಲ್ಲಿ ಹೆಸನ್ ಅವರ ಪಾತ್ರ ಪ್ರಮುಖವಾಗಿತ್ತು. 2018ರಲ್ಲಿ ಅವರು ಕೋಚ್ ಹುದ್ದೆಗೆ ರಾಜೀನಾಮೆ ನೀಡಿದರು.
ನಂತರ 2018ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಹೆಸನ್ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಎರಡು ವರ್ಷಗಳ ಅವಧಿಗೆ ಸಹಿ ಮಾಡಿದ್ದರು. ನತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕ್ರಿಕೆಟ್ ನಿರ್ವಹಣೆಯ ನಿರ್ದೇಶಕರಾದ ನಂತರ ಪಂಜಾಬ್ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದರು. ಹೆಸನ್ ಅವರಲ್ಲಿರುವ ಸಾಮರ್ಥ್ಯಕ್ಕೆ ರಾಯಲ್ ಚಾಲೆಂಜರ್ಸ್ ಈ ಅವಕಾಶವನ್ನು ಕಲ್ಪಿಸಿತು.
“ಒಂದು ಅಥವಾ ಎರಡು ತಿಂಗಳು ನಮ್ಮ ಯೋಜನೆಗಳಲ್ಲಿ ಯಾವುದೇ ಕೆಲಸ ಮಾಡುತ್ತದೆ ಹಾಗೆ ಮಾಡುವುದಿಲ್ಲ ಎಂಬುದನ್ನು ತಿಳಿಯಲು, ಜನರನ್ನು ಅರಿತುಕೊಳ್ಳಲು ಬೇಕಾಗುತ್ತದೆ. ಇದರಲ್ಲಿ ಒಂದು ಅಂಶ, ಮಾಹಿತಿ ಸಂಗ್ರಹಿಸುವುದು ಹಾಗೂ ಇನ್ನೊಂದು ರೀತಿಯಲ್ಲಿ ತಂಡಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವುದು. ಈ ಅಂಶಗಳು ಯಾವ ರೀತಿಯಲ್ಲಿ ಕಾರ್ಯಗತವಾಗುತ್ತದೆ ಎಂಬುದನ್ನು ತಿಳಿಯಲು ಕಾಯಬೇಕಾಗುತ್ತದೆ,” ಎಂದು ಅವರು ವಿವರಿಸಿದರು.
“ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಆಟದ ಯಾವುದೇ ವಿಭಾಗದಲ್ಲೂ ಭಾರತ ಆಗಾಧ ಪ್ರಮಾಣದಲ್ಲಿ ಪ್ರತಿಭೆಗಳನ್ನು ಹೊಂದಿದೆ. ಪ್ರತಿಭೆಗಳನ್ನು ಹೆಚ್ಚಿಸುವುದೇ ಕೋಚ್ ಆದವರ ಕರ್ತವ್ಯ. ಕಾರ್ಯನಿರ್ವಹಣೆ ನಿರ್ದೇಶಕನಾಗಿ ನಾನು ಆ ಕೆಲಸವನ್ನು ಮಾಡಬೇಕಾಗುತ್ತದೆ. ಸೂಕ್ತ ಸ್ಥಾನಕ್ಕೆ ತಕ್ಕುದಾದ ವ್ಯಕ್ತಿ ಸಿಕ್ಕರೆ ಎಲ್ಲವೂ ಸಹಜವಾಗಿ ನಮ್ಮ ನಿರೀಕ್ಷೆಯಂತೆ ನಡೆಯುತ್ತದೆ. ಆಟಗಾರರು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಲು ಅಗತ್ಯವಿರುವ ವಾತಾವರಣವನ್ನು ಸೃಷ್ಟಿಸುವುದಾಗಿದೆ,” ಎಂದರು.
ಕಳೆದ ಮೂರು ಋತುಗಳಲ್ಲಿ ಆರ್ಸಿಬಿಯ ಪ್ರದರ್ಶನ ತೃಪ್ತಿದಾಯಕವಾಗಿರಲಿಲ್ಲ. ಮೂರೂ ಋತುಗಳಲ್ಲಿ ಆರ್ಸಿಬಿ ಪ್ಲೇ ಆಫ್ ಹಂತ ತಲಪುವಲ್ಲಿ ವಿಫಲವಾಗಿತ್ತು. ನೂತನ ಕೋಚ್ ಸೈಮನ್ ಕ್ಯಾಟಿಚ್ ಅವರೊಂದಿಗೆ ಹೊಸ ರೂಪ ನೀಡುವ ಆಶಯವನ್ನು ಹೆಸನ್ ವ್ಯಕ್ತಪಡಿಸಿದ್ದಾರೆ.
2009ರಲ್ಲಿ ಆರಂಭವಾದಾಗಿನಿಂದ ಕೆಪಿಎಲ್ ಐಪಿಎಲ್ಗೆ ಉತ್ತಮ ಪ್ರತಿಭೆಗಳನ್ನು ನೀಡುತ್ತಿದೆ. ಜಗತ್ತಿನ ಅತ್ಯಂತ ದೊಡ್ಡ ಟಿ-20 ಲೀಗ್ನಲ್ಲಿ ರಾಜ್ಯದ 20ಕ್ಕೂ ಹೆಚ್ಚು ಆಟಗಾರರು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. 2020ರ ಐಪಿಎಲ್ಗೆ ಪ್ರತಿಭೆಗಳನ್ನು ಗುರುತಿಸುತ್ತಿರುವ ಹೆಸನ್,“ಕೆಲವು ಪ್ರತಿಭೆಗಳನ್ನು ಗಮನಿಸಲು ಇದೊಂದು ಅವಕಾಶ,” ಎಂದಿದ್ದಾರೆ. “ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಪ್ರತಿಭೆಗಳಿವೆ. ಆರ್ಸಿಬಿಯಲ್ಲಿ ಕೆಲವು ವ್ಯಕ್ತಿಗಳನ್ನು ಅರಿಯಲು ಯತ್ನಿಸುವೆ. ಈ ವಾರದ ಕೊನೆಯಲ್ಲಿ ಆಡಳಿತ ಮಂಡಳಿ ಭೇಟಿಯಾಗುವೆ. ಮಾಹಿತಿ ಕಲೆ ಹಾಕುವುದು ಇದರ ಉದ್ದೇಶವಾಗಿದೆ. ಇದರಿಂದಾಗಿ ಹೆಚ್ಚು ಪ್ರತಿಭೆಗಳನ್ನು ಗುರುತಿಸಬಹುದು,” ಎಂದರು.