ನವದೆಹಲಿ : ಕ್ರಿಕೆಟ್‌ನಲ್ಲಿ ಹೆಸರು ಗಳಿಸಲು ಪ್ರಯತ್ನಿಸುತ್ತಿರುವ ಯಾವುದೇ ಯುವಕನಿಗೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ನಿಜವಾದ ರೋಲ್ ಮಾಡೆಲ್ ಎಂದು ಕೇನ್ ವಿಲಿಯಮ್ಸನ್‌ರನ್ನು ಭಾರತದ ಮಾಜಿ ಬ್ಯಾಟ್ಸ್‌ಮನ್ ವಿ ವಿ ಎಸ್ ಲಕ್ಷ್ಮಣ್ ಪ್ರಶಂಸಿದ್ದಾರೆ.
ಕ್ರೈಸ್ಟ್ ಚರ್ಚ್‌ನಲ್ಲಿ ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ನಲ್ಲಿ ವಿಲಿಯಮ್ಸನ್ ಅದ್ಭುತ ಶತಕ ಸಿಡಿಸಿದರು. ಪಂದ್ಯದ ಎರಡನೆಯ ದಿನ ವಿಶ್ವದ ನಂಬರ್ ಒನ್ ಶ್ರೇಯಾಂಕಿತರಾಗಿರುವ ಅವರು ಟೆಸ್ಟ್ ಕ್ರಿಕೆಟ್ನ ತಮ್ಮ 24ನೇ ಶತಕವನ್ನು ಪೂರ್ಣಗೊಳಿಸಿದರ ನಂತರ ಕಿವೀಸ್ ನಾಯಕನ ಬಗ್ಗೆ ವಿವಿಎಸ್ ಲಕ್ಷ್ಮಣ್ ಅವರು ಟ್ವಿಟರ್ನಲ್ಲಿ ಗುಣಗಾನ ಮಾಡಿದ್ದಾರೆ.
"ಕೇನ್ ವಿಲಿಯಮ್ಸನ್ ಅವರ ಸ್ಥಿರತೆ ನೋಡಿ ಆಶ್ಚರ್ಯ ಪಡಬೇಕಾಗಿಲ್ಲ. ಯಾವುದೇ ಮಾದರಿಯ ಪಂದ್ಯಕ್ಕಾದರೂ ನಂಬಲಾಗದ ಕೆಲಸದ ನೀತಿ ಮತ್ತು ಸಿದ್ಧತೆಯ ಕಡೆಗೆ ಗಮನ ನೀಡುವುದು ಅವರ ಯಶಸ್ಸಿನ ಹಿಂದಿನ ಕಾರಣ. ಯಾವುದೇ ಯುವ ಕ್ರಿಕೆಟಿಗನಾದ್ರೂ ಅನುಕರಿಸಲು ವಿಲಿಯಮ್ಸನ್ ನಿಜವಾದ ಆದರ್ಶಪ್ರಾಯರಾಗಿದ್ದಾರೆ" ಎಂದು ಲಕ್ಷ್ಮಣ್ ಟ್ವೀಟಿಸಿದ್ದಾರೆ.
ಸೋಮವಾರದಂತ್ಯಕ್ಕೆ ವಿಲಿಯಮ್ಸನ್ 175 ಎಸೆತಗಳಲ್ಲಿ 16 ಬೌಂಡರಿ ಸಹಿತ 112 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದ್ದಾರೆ. ಇವರಿಗೆ ಸೂಕ್ತ ಬೆಂಬಲ ವ್ಯಕ್ತಪಡಿಸಿರುವ ಹೆನ್ರಿ ನಿಕೋಲ್ಸ್ 186 ಎಸೆತಗಳಲ್ಲಿ 8 ಬೌಂಡರಿ ಸಹಿತ 89 ರನ್ಗಳಿಸಿ ಅಜೇಯರಾಗುಳಿದಿದ್ದಾರೆ.
ಪ್ರಸ್ತುತ ನ್ಯೂಜಿಲ್ಯಾಂಡ್ ತಂಡ 85 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 286 ರನ್ಗಳಿಸಿದೆ. ಪಾಕಿಸ್ತಾನ ಮೊದಲ ಇನ್ನಿಂಗ್ಸ್ನಲ್ಲಿ 297 ರನ್ಗಳಿಸಿದೆ.
ಇದನ್ನು ಓದಿ:ಬ್ರಿಸ್ಬೇನ್ಗೆ ತೆರಳಲು ಭಾರತ ತಂಡ ಹಿಂದೇಟು ಹಾಕುತ್ತಿದೆ ಎಂಬುದು ಸುಳ್ಳು: ಸಿಎ ಬಾಸ್ ನಿಕ್ ಹಾಕ್ಲೆ