ನವದೆಹಲಿ: ಭಾರತ ಕ್ರಿಕೆಟ್ ತಂಡದ ಶ್ರೇಷ್ಠ ಬ್ಯಾಟ್ಸ್ಮನ್ ಸಚಿನ್ ತೆಂಡೂಲ್ಕರ್ಗೆ ಐಸಿಸಿ ಆಲ್ ಆಫ್ ಫೇಮ್ ಗೌರವ ನೀಡಿದೆ. ಅದ್ರೆ ಸಚಿನ್ಗೂ ಮೊದಲೇ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆಗೆ ಈ ಗೌರವ ನೀಡಲಾಗಿತ್ತು.
ಸಚಿನ್ ಸಮಕಾಲಿನ ಆಟಗಾರರಾದ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆಗೆ ತೆಂಡೂಲ್ಕರ್ಗೂ ಮೊದಲೇ ಏಕೆ ಈ ಗೌರವ ನೀಡಲಾಯಿತು ಎಂಬುದು ಹಲವರ ಪ್ರಶ್ನೆಯಾಗಿದೆ.
ಈ ವಿಶೇಷ ಕ್ಲಬ್ಗೆ ಒಬ್ಬರ ಹೆಸರು ಸೇರಿಸಬೇಕಾದರೆ ಅದಕ್ಕೆ ಕೆಲವು ನಿಯಮಗಳಿವೆ. ಹಾಲ್ ಆಫ್ ಫೇಮ್ ಕ್ಲಬ್ಗೆ ಒಬ್ಬ ಆಟಗಾರನನ್ನ ಸೇರಿಸ ಬೇಕಾದರೆ ಆ ಆಟಗಾರ ಅಂತಾರಾಷ್ಟ್ರೀಯ ಏಕದಿನ ಅಥವಾ ಟೆಸ್ಟ್ ಕ್ರಿಕೆಟ್ನಲ್ಲಿ 20 ಶತಕಗಳೊಂದಿಗೆ ಎಂಟು ಸಾವಿರ ರನ್ ಪೂರೈಸಿರಬೇಕು. ಬೌಲರ್ ಆಗಿದ್ದರೆ ಟೆಸ್ಟ್ ಕ್ರಿಕೆಟ್ನಲ್ಲಿ 50 ಸ್ಟ್ರೈಕ್ ರೇಟ್ನೊಂದಿಗೆ 200 ವಿಕೆಟ್ ಅಥವಾ ಏಕದಿನ ಕ್ರಿಕೆಟ್ನಲ್ಲಿ 30 ಸ್ಟ್ರೈಕ್ ರೇಟ್ನೊಂದಿಗೆ 200 ವಿಕೆಟ್ ಗಳಿಸಿರಬೇಕು.
ಎರಡನೇ ನಿಯಮದ ಪ್ರಕಾರ, ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿ 5 ವರ್ಷ ಕಳೆದ ನಂತರವಷ್ಟೇ ಹಾಲ್ ಆಫ್ ಫೇಮ್ ಗೌರವ ನೀಡಲಾಗುತ್ತದೆ. ಅನಿಲ್ ಕುಂಬ್ಳೆ 2008ರಲ್ಲಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ರೆ, ದ್ರಾವಿಡ್ 2012ರಲ್ಲಿ ನಿವೃತ್ತಿ ಘೋಷಿಸಿದ್ದರು. ಆದ್ರೆ ಸಚಿನ್ ತೆಂಡೂಲ್ಕರ್ 2013ರಲ್ಲಿ ನಿವೃತ್ತಿ ಘೋಷಣೆ ಮಾಡಿದ್ದರು. ಹೀಗಾಗಿ ಸಚಿನ್ಗೂ ಮೊದಲೆ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಅವರಿಗೆ ಹಾಲ್ ಆಫ್ ಫೇಮ್ ಗೌರವ ನೀಡಲಾಗಿತ್ತು.
ಇಲ್ಲಿಯವರೆಗೆ ಇಂಗ್ಲೆಂಡ್ ತಂಡದ 28, ಆಸ್ಟ್ರೇಲಿಯಾ ತಂಡದ 26, ವೆಸ್ಟ್ ಇಂಡೀಸ್ ತಂಡದ 18, ಭಾರತ ತಂಡದ 6, ಪಾಕಿಸ್ತಾನ ತಂಡದ 5, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡದ 3, ಶ್ರೀಲಂಕಾ ತಂಡದ ಓರ್ವ ಆಟಗಾರ ಸೇರಿದಂತೆ 87 ಆಟಗಾರರಿಗೆ ಈ ಗೌರವ ನೀಡಲಾಗಿದೆ.