ನವದೆಹಲಿ : ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಖ್ಯಸ್ಥ ಸೌರವ್ ಗಂಗೂಲಿ ಶನಿವಾರ ಖಚಿತಪಡಿಸಿದ್ದಾರೆ.
ಟಿವಿ ವಾಹಿನಿಯೊಂದಿಗೆ ಈ ಕುರಿತು ಮಾಹಿತಿ ನೀಡಿರುವ ಗಂಗೂಲಿ, 'ಹೌದು ನಾವು ಭಾರತ ತಂಡ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುತ್ತಿರುವುದನ್ನ ಖಚಿತಪಡಿಸಿದ್ದೇವೆ. ಹೀಗಾಗಿ ಕ್ವಾರಂಟೈನ್ ದಿನಗಳು ಸ್ವಲ್ಪ ಕಡಿಮೆಯಾಗುತ್ತದೆ. ಯಾಕೆಂದರೆ, ಆಟಗಾರರು ಅಷ್ಟು ದೂರ ಹೋಗಿ ಹೋಟೆಲ್ ಕೋಣೆಗಳಲ್ಲಿ ಎರಡು ವಾರಗಳ ಕಾಲ ಕುಳಿತುಕೊಳ್ಳುವುದು ನಮಗೆ ಇಷ್ಟವಿಲ್ಲ. ಇದರಿಂದ, ಖಿನ್ನತೆ ಮತ್ತು ನಿರಾಶರಾಗಲು ಕಾರಣವಾಗುತ್ತದೆ' ಎಂದು ಹೇಳಿದ್ದಾರೆ.
ಭಾರತದ ಪ್ರವಾಸ ಕುರಿತು ಮಾತನಾಡಿದ ಗಂಗೂಲಿ, ಮೆಲ್ಬೋರ್ನ್ ಹೊರತುಪಡಿಸಿ ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸುವಲ್ಲಿ ಆಸ್ಟ್ರೇಲಿಯಾ ಯಶಸ್ವಿಯಾಗಿದೆ. ಆಸ್ಟ್ರೇಲಿಯಾದ 2ನೇ ಅತಿದೊಡ್ಡ ನಗರದ ಮೆಲ್ಬೋರ್ನ್ನಲ್ಲಿ ಕೊರೊನಾ ಪ್ರಕರಣ ಉಲ್ಪಣವಾಗುತ್ತಿವೆ. ಹಾಗಾಗಿ ಲಾಕ್‌ಡೌನ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಮೆಲ್ಬೋರ್ನ್ ಹೊರತುಪಡಿಸಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ನಲ್ಲಿ ಕೊರೊನಾ ನಿಯಂತ್ರಣದಲ್ಲಿದೆ, ಈ ದೃಷ್ಠಿಯಿಂದ ನಾವು ಅಲ್ಲಿಗೆ ಹೋಗುತ್ತೇವೆ. ಹೀಗಾಗಿ ಕ್ವಾರಂಟೈನ್ ದಿನಗಳು ಕಮ್ಮಿಯಾಗಲಿವೆ. ನಾವು ಆದಷ್ಟು ಬೇಗ ಕ್ರಿಕೆಟ್ಗೆ ಮರಳಬಹುದು ಎಂದಿದ್ದಾರೆ ಗಂಗೂಲಿ. ಮೂರು ಪಂದ್ಯಗಳ ಟೆಸ್ಟ್ ಸರಣಿಗಾಗಿ ಯುಕೆಗೆ ಪ್ರಯಾಣಿಸಿರುವ ವಿಂಡೀಸ್ ತಂಡವೂ ಸಹ 14 ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಿತ್ತು.
ಡಿಸೆಂಬರ್ ಮತ್ತು ಜನವರಿಯಲ್ಲಿ ಟೀಂ ಇಂಡಿಯಾ ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿವೆ. ವಿರಾಟ್ ಕೊಹ್ಲಿ ನೇತೃತ್ವದ ತಂಡ 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿ ಗೆದ್ದು ಇತಿಹಾಸ ನಿರ್ಮಿಸಿತ್ತು.