ನವದೆಹಲಿ : ಭಾರತ ಮೂಲದ ಬಹುರಾಷ್ಟ್ರೀಯ ಕಂಪನಿಗಳು ಮತ್ತು ಸ್ಥಳೀಯ ಕಾರ್ಪೊರೇಟ್ ಸಂಸ್ಥೆಗಳು ಪ್ರಾಯೋಜಕತ್ವದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಶೇ.70ಕ್ಕಿಂತ ಹೆಚ್ಚಿನ ಆರ್ಥಿಕತೆ ಹರಿದು ಬರುತ್ತದೆ. ಹೀಗಾಗಿ, ವಿಶ್ವ ಕ್ರಿಕೆಟ್ಗೆ ಭಾರತ ನೀಡಿರುವ ಕೊಡುಗೆಯನ್ನು ಕಡಿಮೆ ಎಂದು ಅಂದಾಜು ಮಾಡಬಾರದು ಅಂತಾ ಐಸಿಸಿಯ ನೂತನ ಅಧ್ಯಕ್ಷ ಗ್ರೆಗ್ ಜಾನ್ ಬಾರ್ಕ್ಲೆ ಹೇಳಿದರು.
ಭಾರತ ಕ್ರಿಕೆಟ್ ತಂಡವು ಐಸಿಸಿ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಮೂಲಕ ಹೆಚ್ಚು ಆದಾಯ ತಂದು ಕೊಡಬಲ್ಲ ಪ್ರಮುಖ ತಂಡಗಳಲ್ಲಿ ಒಂದಾಗಿದೆ. ಅದರಲ್ಲಿ ಎರಡು ಮಾತಿಲ್ಲ. ಆದರೆ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪ್ರಾರಂಭಿಸಿದ 'ಬಿಗ್ ತ್ರೀ' ಪರಿಕಲ್ಪನೆಗೆ ಚಂದಾದಾರಾಗುವುದಿಲ್ಲ ಎಂದರು.
ಕೆಲವು ವಿಷಯಗಳಿಗೆ ಸಂಬಂಧಿಸಿದಂತೆ ಮೂರು ಶಕ್ತಿಶಾಲಿ ದೇಶಗಳನ್ನು ಪರಿಗಣಿಸಬೇಕು ಎಂಬ ವ್ಯವಸ್ಥೆಯನ್ನು 2014ರಲ್ಲಿ ಜಾರಿಗೆ ತರಲಾಗಿದೆ. ಅವುಗಳನ್ನು ಕೆಲವು ವರ್ಷಗಳ ಹಿಂದೆಯೇ ಆ ನಿಯಮದಿಂದ ಹಿಂದಕ್ಕೆ ತರಲಾಯಿತು. ಪ್ರಾಯೋಜಕತ್ವ ವಿತರಣೆ ಅಡಿ ಎಲ್ಲರಿಗಿಂತ ಆಸ್ಟ್ರೇಲಿಯಾ, ಇಂಗ್ಲೆಂಡ್ ಕೂಡ ಅದೇ ಪ್ರಮಾಣದ ವ್ಯವಹಾರ ತಂದುಕೊಡುತ್ತವೆ ಎಂದು ಬಾರ್ಕ್ಲೆ ವರ್ಚುವಲ್ ಮೀಡಿಯಾ ಸಂವಾದದಲ್ಲಿ ಹೇಳಿದರು.
ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಗಳಿಗೆ ಐಸಿಸಿ ಹಣದ ಸಿಂಹ ಪಾಲನ್ನು ಒದಗಿಸುವ 'ಬಿಗ್ ತ್ರೀ' ಪರಿಕಲ್ಪನೆ ರಚನೆಗೆ ಬಿಸಿಸಿಐ ಕಾರಣವಾಯಿತು. ಈ ಮೂರು ದೇಶಗಳು, ಬೇರೆ ರಾಷ್ಟ್ರಗಳಿಗಿಂತ ಐಸಿಸಿಗೆ ಹೆಚ್ಚಿನ ಕೊಡುಗೆ ನೀಡುತ್ತೇವೆ ಎಂದು ವಾದಿಸಿದ್ದರು.
ಹೀಗಾಗಿ, ಐಸಿಸಿಯಿಂದ ಹೆಚ್ಚು ಹಣ ಪಡೆದುಕೊಳ್ಳಲು ಅರ್ಹರಾದರು. 2015ರಲ್ಲಿ ಭಾರತದ ಶಶಾಂಕ್ ಮನೋಹರ್ ಅವರು ಶ್ರೀನಿವಾಸನ್ ಅವರ ನಂತರ ಐಸಿಸಿ ಅಧ್ಯಕ್ಷರಾಗಿ ಈ ಸೂತ್ರವನ್ನು ಕಳಚಿ, ಐಸಿಸಿ ಕಿಟ್ಟಿಯಿಂದ ಹಣವನ್ನು ವಿತರಿಸುವ ವಿಧಾನ ಜಾರಿಗೆ ತಂದರು. ಹೀಗಾಗಿ, ಮತ್ತೆ ಆ ಪರಿಕಲ್ಪನೆಗೆ ಚಂದಾದಾರರಾಗುವುದಿಲ್ಲ ಎಂದರು.
ಬಹಳಷ್ಟು ಪರಿಣಾಮ ಕೆಲಸಗಳಿಗೆ ಹಣ ಅನಿವಾರ್ಯವಾಗಿದೆ. ಮುಂದಿನ 8-10 ವರ್ಷಗಳಲ್ಲಿ ಐಸಿಸಿ ಜಾಗತಿಕ ತಂತ್ರಗಳನ್ನು ರೂಪಿಸಿ ನೂರಾರು ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕಿದೆ. ಅದಕ್ಕಾಗಿ ದೇಶಗಳ ನಡುವೆ ದ್ವಿಪಕ್ಷೀಯ ಕಾರ್ಯಕ್ರಮ ನಿರ್ಮಿಸಲು ಪ್ರಾರಂಭಿಸಬೇಕು ಎಂದು ಭಾವಿಸುತ್ತೇನೆ ಎಂದ ಅವರು, ಹೂಡಿಕೆ ಅಗತ್ಯವಿರುವ ಒಂದು ಕ್ಷೇತ್ರವೆಂದರೆ ಮಹಿಳಾ ಕ್ರಿಕೆಟ್. ಅಧಿಕ ಪ್ರಮಾಣದಲ್ಲಿ ಹೂಡಿಕೆ ಮಾಡಬೇಕಾಗಿದೆ ಎಂದರು.