ಮುಂಬೈ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲ್ಯಾಂಡ್ ವಿರುದ್ಧ ವೃತ್ತಿ ಜೀವನದಲ್ಲೇ ಅತ್ಯಂತ ಕಳಪೆ ಬ್ಯಾಟಿಂಗ್ ನಡೆಸಿ ಟೀಕೆಗೆ ಗುರಿಯಾಗಿದ್ದಾರೆ. ಆದರೆ ಬಿಸಿಸಿಐ ಆಯ್ಕೆಸಮಿತಿ ಮುಖ್ಯಸ್ಥ ಎಂಸ್ಕೆ ಪ್ರಸಾದ್ ಮಾತ್ರ ಕೊಹ್ಲಿ ವೈಫಲ್ಯದ ಬಗ್ಗೆ ಟೀಕಿಸಿದವರಿಗೆ ತಿರುಗೇಟು ನೀಡಿದ್ದಾರೆ.
ವಿರಾಟ್ ಕೊಹ್ಲಿ ಕಿವೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೇವಲ 9.5 ರ ಸರಾಸರಿಯಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅವರು ನಾಲ್ಕು ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 1,19,3,14 ರನ್ಗಳಿಗೆ ವಿಕೆಟ್ ಒಪ್ಪಿಸಿದ್ದಾರೆ. ಇದು ಅವರ ವಿರುದ್ಧದ ಟೀಕೆಗೆ ಅನುವು ಮಾಡಿಕೊಟ್ಟಿದೆ.
ಕೊಹ್ಲಿ ವೈಫಲ್ಯದ ಬಗ್ಗೆ ಪ್ರತಿಕ್ರಿಯೆ ಕೇಳಿದ್ದಕ್ಕೆ ಉತ್ತರಿಸಿರುವ ಪ್ರಸಾದ್, "ಯಾರು ಹಲವಾರು ವರ್ಷಗಳಿಂದ ರನ್ ಮಷಿನ್ ಎಂದು ಖ್ಯಾತಿ ಪಡೆದಿರುವ ಅವರ ಬಗ್ಗೆ ನಾವೆಲ್ಲಾ ಮಾತನಾದಾಡುತ್ತಿದ್ದೇವೆ. ಅವರು(ಕೊಹ್ಲಿ) ಕೂಡ ಮನುಷ್ಯರೇ. ಕೇವಲ ಒಂದು ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿಲ್ಲ. ಒಂದು ಸರಣಿ ವೈಫಲ್ಯಕ್ಕೆ ಅವರ ವಿರುದ್ಧ ಮಾತನಾಡಬಾರದು. ಅವರೊಬ್ಬ ಅದ್ಭುತ ಆಟಗಾರ" ಎಂದು ಕೊಹ್ಲಿ ಬಗ್ಗೆ ಟೀಕಿಸುವವರಿಗೆ ತಿರುಗೇಟು ನೀಡಿದ್ದಾರೆ.
ಇನ್ನು ಗಾಯದಿಂದ ಚೇತರಿಸಿಕೊಂಡಿರುವ ಧವನ್, ಭುವನೇಶ್ವರ್ ಹಾಗೂ ಹಾರ್ದಿಕ್ ಪಾಂಡ್ಯ ಡಿವೈ ಪಾಟೀಲ್ ಟಿ20 ಸರಣಿಯಲ್ಲಿ ಪಾಲ್ಗೊಂಡಿರುವುದರಿಂದ ಅವರ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದಾರೆ.
" ಡಿವೈ ಪಾಟೀಲ್ ಟೂರ್ನಮೆಂಟ್ನಲ್ಲಿ ಶಿಖರ್ ಧವನ್, ಭುವಿ ಹಾಗೂ ಹಾರ್ದಿಕ್ ಪಾಂಡ್ಯ ಅವರ ಆಟವನ್ನು ನೋಡುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ. ಅವರೆಲ್ಲರೂ ಗಾಯದಿಂದ ಚೇತರಿಸಿಕೊಂಡಿದ್ದು, ಅವರ ಪ್ರಗತಿಯನ್ನು ನೋಡಲು ಖುಷಿಯಾಗುತ್ತಿದೆ" ಎಂದಿದ್ದಾರೆ.
ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ ತಂಡದಲ್ಲಿ ಈ ಮೂವರು ಆಟಗಾರರು ಸ್ಥಾನ ಪಡೆಯುವ ಸಾಧ್ಯತೆಯಿದೆ. ಇನ್ನು ಈ ಸರಣಿಯಲ್ಲಿ ಕೊಹ್ಲಿಗೆ ವಿಶ್ರಾಂತಿ ಪಡೆಯಲಿದ್ದಾರೆ ಎನ್ನಲಾಗುತ್ತಿದ್ದು, ರಾಹುಲ್ ಹಾಗೂ ಶಿಖರ್ ಧವನ್ ನಾಯಕತ್ವ ವಹಿಸುವ ಸಾಧ್ಯತೆಯಿದೆ.