ಲಂಡನ್: ಕಿವೀಸ್ ತಂಡವನ್ನು ಬೌಂಡರಿ ಆಧಾರದ ಮೇಲೆ ಮಣಿಸಿ ಚೊಚ್ಚಲ ವಿಶ್ವಕಪ್ ಜಯಸಿರುವ ಇಂಗ್ಲೆಂಡ್ ತಂಡವನ್ನು ಅಲ್ಲಿನ ಪ್ರಧಾನಿ ಥೆರೆಸಾ ಮೇ ಅಭಿನಂದಿಸಿದ್ದಾರೆ.
ವಿಶ್ವಕಪ್ ವಿಜೇತ ತಂಡಕ್ಕೆ ಥೆರೆಸಾ ಮೇ ಅಭಿನಂದನೆ ಸಲ್ಲಿಸಿದ್ದು, ಇಂಗ್ಲೆಂಡ್ ಕ್ರಿಕೆಟ್ ತಂಡದ ಈ ಯಶಸ್ಸು ಇಡೀ ದೇಶದ ಜನತೆಯನ್ನು ಮತ್ತೆ ಕ್ರಿಕೆಟ್ ಮೇಲೆ ಪ್ರೀತಿ ಬೆಳೆಸಿಕೊಳ್ಳುವಂತೆ ಮಾಡಿದೆ. ಈ ವಿಶ್ವಕಪ್ ನಿಜಕ್ಕೂ ಬಹಳ ರೋಮಾಂಚನಕಾರಿಯಾಗಿ ಕೂಡಿತ್ತು. ಇದು ನಮ್ಮ ಕಾಲದ ಅತ್ಯುತ್ತಮ ಕ್ರೀಡಾ ಪ್ರದರ್ಶನಗಳಲ್ಲಿ ಒಂದಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡವನ್ನು ಪ್ರಶಂಸಿದ್ದಾರೆ.
ನೀವು ಆಧುನಿಕ ಬ್ರಿಟನ್ಅನ್ನು ಪ್ರತಿನಿಧಿಸಿದ್ದು, ನಿಮ್ಮ ಪ್ರದರ್ಶನ ಬೇರೆ ತಂಡಗಳಿಗಿಂತ ಭಿನ್ನವಾಗಿತ್ತು. ಸೋಲು ನಿಮ್ಮ ಎದುರು ಬಂದಾಗ ಅದನ್ನು ಸರಳ ಹಾಗೂ ಮೊಂಡುತನದಿಂದ ನಿರಾಕರಿಸಿದ್ದೀರಾ. ನಿಮ್ಮ ದೃಢ ಸಂಕಲ್ಪವೇ ನಿಮ್ಮನ್ನು ಚಾಂಪಿಯನ್ ಆಗಿ ಮಾಡಿದೆ ಎಂದು ಥೆರಸಾ ಮೇ ತಮ್ಮ ಆಟಗಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಶ್ವಕಪ್ ಗೆಲ್ಲುವ ಮೂಲಕ ಇಡೀ ರಾಷ್ಟ್ರವನ್ನು ಮತ್ತೆ ಕ್ರಿಕೆಟ್ನತ್ತ ತಿರುಗುವಂತೆ ಮಾಡಿದ್ದೀರ. ನಮ್ಮ ಈ ತಂಡದ ಈ ವಿಸ್ಮಯವನ್ನು ಮುಂದಿನ ತಲೆಮಾರು ಕೂಡ ಮಾತನಾಡಿಕೊಳ್ಳುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.