ಮುಂಬೈ: ಜಮ್ಮು ಕಾಶ್ಮೀರದ ಮಹಿಳಾ ತಂಡ ಕ್ರಿಕೆಟ್ ಪಂದ್ಯವನ್ನಾಡಲು ಮೊದಲ ಬಾರಿಗೆ ಮಹಾರಾಷ್ಟ್ರ ಪ್ರವಾಸ ಕೈಗೊಂಡಿದೆ. ಪುಣೆಯಲ್ಲಿ ಅಸ್ಸಾಮ್ ರೈಫಲ್ಸ್ ತಂಡದ ವಿರುದ್ಧ ಪಂದ್ಯವನ್ನಾಡಿದ ನಂತರ ಕಾಶ್ಮೀರ ತಂಡವು ಮುಂಬೈಗೆ ಭೇಟಿ ನೀಡಿದ್ದು, ಸ್ವತಃ ಭಾರತದ ಮಾಜಿ ನಾಯಕ ದಿಲೀಪ್ ವೆಂಗಸರ್ಕರ್ ಜಮ್ಮು ಕಾಶ್ಮೀರ ಮಹಿಳಾ ತಂಡವನ್ನು ಸ್ವಾಗತಿಸಿದ್ದಾರೆ.
ಸದಾ ಬಂದೂಕಿನಿಂದ ಸಿಡಿಯುವ ಗುಂಡಿನ ಸದ್ದನ್ನೇ ಕೇಳುವ ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮಹಿಳೆಯರು ಮೂಲಭೂತವಾದಿಗಳ ಬೆದರಿಕೆ ನಡುವೆಯೂ ಚೆಂಡು ದಾಂಡಿನ ಆಟಕ್ಕೆ ಮನಸೋತು ಮೈದಾನಕ್ಕಿಳಿಯುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕ್ರಿಕೆಟ್ ಪಂದ್ಯವನ್ನಾಡಲು ಅಂತಾರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಕಾಶ್ಮೀರ ಯುವತಿಯರು ಕ್ರಿಕೆಟ್ ಆಟವನ್ನು ಸ್ವೀಕರಿಸಿದ್ದಕ್ಕಾಗಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್ ಮತ್ತು ಇರ್ಫಾನ್ ಪಠಾಣ್ ಕೂಡ ಯುವತಿಯರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು.
ಅಸೀಮ್ ಫೌಂಡೇಶನ್ ಆಯೋಜಿಸಿರುವ ಈ ವಿಶೇಷ ಪಂದ್ಯದ ಬಗ್ಗೆ ಮಾತನಾಡಿದ ಕಾಶ್ಮೀರ ತಂಡದ ನಾಯಕಿ, "ನಮಗಾಗಿ ಇಂತಹ ಕಾರ್ಯಕ್ರಮ ಆಯೋಜಿಸಿದ ರೋಟರಿ ಕ್ಲಬ್ ಮತ್ತು ಅಸೀಮ್ ಫೌಂಡೇಶನ್‌ಗೆ ಅನೇಕ ಧನ್ಯವಾದಗಳು." ಎಂದು ಹೇಳಿದ್ದಾರೆ.
"ಸಚಿನ್ ತೆಂಡೂಲ್ಕರ್ ಮತ್ತು ಇರ್ಫಾನ್ ಪಠಾಣ್ ಅವರಿಂದ ಪ್ರೇರಿತರಾಗಿರುವ ತಂಡ ಮುಂಬೈಗೆ ಬಂದು ಕ್ರಿಕೆಟ್ ಆಡಲು ಬಯಸಿತ್ತು" ಎಂದು ಅಸೀಮ್ ಫೌಂಡೇಶನ್‌ನ ಅಧ್ಯಕ್ಷ ಸರಂಗ್ ಗೋಸವಿ ಹೇಳಿದ್ದಾರೆ. ಅಲ್ಲದೆ ಈ ಟೂರ್ನಮೆಂಟ್ನಲ್ಲಿ ತಂಡಕ್ಕೆ ಆಡುವುದಕ್ಕೆ ಮಾನ್ಯತೆ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಅವರು ಹೇಳಿದ್ದಾರೆ.