ಮೆಲ್ಬೋರ್ನ್: ಶೇನ್ ವಾರ್ನ್ ಬಳಿಕ ಆಸ್ಟ್ರೇಲಿಯಾದ ಶ್ರೇಷ್ಠ ಸ್ಪಿನ್ನರ್ ಎಂದು ಗುರುತಿಸಿಕೊಂಡಿರುವ ನಥನ್ ಲಿಯಾನ್ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆಯುವ ಮಹದಾಸೆ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.
ಪ್ರಸ್ತುತ ಲಿಯಾನ್ 96 ಟೆಸ್ಟ್ ಪಂದ್ಯಗಳಿಂದ 390 ವಿಕೆಟ್ ಪಡೆದಿದ್ದಾರೆ. ಅವರು ಆಸ್ಟ್ರೇಲಿಯಾ ಪರ ಗರಿಷ್ಠ ವಿಕೆಟ್ ಪಡದಿರುವ 3ನೇ ಬೌಲರ್ ಎನಿಸಿಕೊಂಡಿದ್ದಾರೆ. ಮೊದಲ ಸ್ಥಾನದಲ್ಲಿ ಶೇನ್ ವಾರ್ನ್(708) ಹಾಗೂ 2ನೇ ಸ್ಥಾನದಲ್ಲಿ ವೇಗಿ ಗ್ಲೇನ್ ಮೆಕ್ಗ್ರಾತ್ (563) ಇದ್ದಾರೆ.
ಪ್ರಸ್ತುತ ಆಸ್ಟ್ರೇಲಿಯಾದ ಪ್ರಮುಖ ಸ್ಪಿನ್ನರ್ ಆಗಿರುವ ಲಿಯಾನ್ ಕೊರೊನಾ ವೈರಸ್ ಕಾರಣ ಟೆಸ್ಟ್ ಕ್ರಿಕೆಟ್ ಮಿಸ್ ಮಾಡಿಕೊಂಡಿರುವುದಾಗಿ ಹೇಳಿದ್ದು, ಮತ್ತೆ ಬೇಸಿಗೆಯಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯುತ್ತಿರುವುದು ಖುಷಿಯಾಗಿದೆ ಎಂದು ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮಗೆ ಟೆಸ್ಟ್ ಕ್ರಿಕೆಟ್‌ನಲ್ಲಿ 500 ವಿಕೆಟ್ ಗಡಿ ದಾಟುವ ಆಸೆ ಹೆಚ್ಚಾಗುತ್ತಿದೆ ಎಂದು ಲಿಯಾನ್ ಹೇಳಿದ್ದಾರೆ.
"ನಾನು ಬೌಲಿಂಗ್ನಲ್ಲಿ ಇನ್ನೂ ಉತ್ತಮಗೊಳ್ಳುತ್ತಿದ್ದೇನೆ ಎಂದು ಭಾವಿಸುತ್ತೇನೆ. ಜೊತೆಗೆ ಆಸ್ಟ್ರೇಲಿಯಾಕ್ಕೆ ಇನ್ನೂ ಹೆಚ್ಚಿನ ವಿಕೆಟ್ ಪಡೆಯಲಿದ್ದೇನೆ ಎಂದು ನನಗನ್ನಿಸುತ್ತಿದೆ ಎಂದಿರುವ 33 ವರ್ಷದ ಬೌಲರ್, ಖಂಡಿತವಾಗಿಯೂ 500ಕ್ಕೂ ಹೆಚ್ಚು ವಿಕೆಟ್ ಪಡೆಯೋ ಗುರಿಯಿದೆ" ಎಂದು ಹೇಳಿದ್ದಾರೆ.
ಆಸೀಸ್ ಹಿರಿಯ ಸ್ಪಿನ್ನರ್ ಕೋವಿಡ್-19 ಸಾಂಕ್ರಾಮಿಕಕ್ಕಿಂತ ಹಿಂದೆ ಜನವರಿಯಲ್ಲಿ ಟೆಸ್ಟ್ ಕ್ರಿಕೆಟ್ ಆಡಿದ್ದರು. ಹಾಗಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಲು ಈ ಬ್ರೇಕ್ ನನ್ನಲ್ಲಿ ಹಸಿವನ್ನು ಹೆಚ್ಚಿಸಿದೆ ಎಂದಿದ್ದಾರೆ.
ಡಿಸೆಂಬರ್ 17ರಂದು ಅಡಿಲೇಡ್ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. 2ನೇ ಹಾಗೂ ಬಾಕ್ಸಿಂಗ್ ಡೇ ಟೆಸ್ಟ್ ಡಿ. 26ರಿಂದ 30, 3ನೇ ಟೆಸ್ಟ್ ಜನವರಿ 7-11, ಕೊನೆಯ ಟೆಸ್ಟ್ ಜನವರಿ 15-19ರವರೆಗೆ ನಡೆಯಲಿದೆ.