ಬೆಂಗಳೂರು: ರಿಷಭ್ ಪಂತ್ ನಾಲ್ಕನೇ ಕ್ರಮಾಂಕದಲ್ಲಿ ಯಶಸ್ವಿ ಆಗದರಿವುದರಿಂದ ಅವರನ್ನ ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿಸಿ ಅವರಿಷ್ಟದಂತೆ ಆಡಲು ಏಕೆ ಅವಕಾಶ ಮಾಡಿಕೊಡಬಾರದು ಎಂದು ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಅಭಿಪ್ರಾಯಪಟ್ಟಿದ್ದಾರೆ.
ದಿನದಿಂದ ದಿನಕ್ಕೆ ರಿಷಭ್ ಪಂತ್ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಯುವ ಆಟಗಾರ ಕೆಟ್ಟ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸುತ್ತಿರುವುದು ತಂಡಕ್ಕೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಅದಕ್ಕಾಗಿ ರಿಷಭ್ಗೆ ಕೆಲವು ಹಿರಿಯ ಆಟಗಾರರು ಸಲಹೆ ನೀಡಿದರೆ, ಇನ್ನು ಕೆಲವರು ಎಚ್ಚರಿಕೆ ನೀಡಿದ್ದರು. ಇದೀಗ ಪಂತ್ರನ್ನು ಯಾವ ಕ್ರಮಾಂಕದಲ್ಲಿ ಆಡಿಸಿದರೆ ಉತ್ತಮ ಎಂಬುದನ್ನು ವಿವಿಎಸ್ ಲಕ್ಷ್ಮಣ್ ತಿಳಿಸಿದ್ದಾರೆ.
"ರಿಷಭ್ ಪಂತ್ ಸ್ಫೋಟಕ ಆಟಗಾರ ಎಂಬುದು ತಿಳಿದಿದೆ. ಅವರು ಪದೆ ಪದೇ 4 ನೇ ಕ್ರಮಾಂದಲ್ಲಿ ಉತ್ತಮ ರನ್ ಗಳಿಸಲು ವಿಫಲರಾಗುತ್ತಿದ್ದಾರೆ. ಸ್ಟ್ರೈಕ್ ಬದಲಾಯಿಸಲು ಕೂಡ ಪರದಾಡುತ್ತಿದ್ದಾರೆ. ಹಾಗಾಗಿ 4 ನೇ ಕ್ರಮಾಂಕ ಅವರಿಗೆ ಸೂಕ್ತವಲ್ಲ, ಅವರನ್ನು 5 ಅಥವಾ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿಸಬೇಕು. ಕೆಳ ಕ್ರಮಾಂಕ ಅವರ ಸ್ಫೋಟಕ ಬ್ಯಾಟಿಂಗ್ಗೆ ನೆರವಾಗಲಿದೆ. 4 ನೇ ಕ್ರಮಾಂಕಕ್ಕೆ ಹಾರ್ದಿಕ್ ಪಾಂಡ್ಯ ಅಥವಾ ಶ್ರೇಯಸ್ ಅಯ್ಯರ್ರನ್ನು ಆಡಿಸುವುದು ಉತ್ತಮ" ಎಂದು ಲಕ್ಷ್ಮಣ್ ಸಲಹೆ ನೀಡಿದ್ದಾರೆ.
ಮಾಜಿ ನಾಯಕ ವಿಕೆಟ್ ಕೀಪರ್ ಎಂ ಎಸ್ ಧೋನಿ ಕೂಡ 6ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಅವರು ಹಲವಾರು ವರ್ಷಗಳ ತಂಡದ ಪರ ಸಂದರ್ಭಕ್ಕೆ ತಕ್ಕಂತೆ ಬ್ಯಾಟಿಂಗ್ ನಡೆಸಿ ಯಶಸ್ವಿಯೂ ಆಗಿದ್ದಾರೆ. ಇದೀಗ ಪಂತ್ಗೂ ಟೀಂ ಮ್ಯಾನೇಜ್ಮೆಂಟ್ 5 ಅಥವಾ 6ನೇ ಕ್ರಮಾಂಕದಲ್ಲಿ ಆಡುವ ಅವಕಾಶ ನೀಡಬೇಕು ಎಂದಿದ್ದಾರೆ.