ಸಿಡ್ನಿ: ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ಸರಣಿಯಲ್ಲೇ ಅದ್ಭುತ ಪ್ರದರ್ಶನ ತೋರಿರುವ ಟಿ.ನಟರಾಜನ್ ಬಗ್ಗೆ ನಾಯಕ ವಿರಾಟ್ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆತ ಇದೇ ಪ್ರದರ್ಶನ ತೋರಿದರೆ ಮುಂಬರುವ ಟಿ-20 ವಿಶ್ವಕಪ್ಗೆ ಬಹುದೊಡ್ಡ ಅಸ್ತ್ರ ಎಂದು ಹೇಳಿದ್ದಾರೆ.
ಮಂಗಳವಾರ ಕೊನೆಗೊಂಡ ಕೊನೆಯ ಟಿ-20 ಪಂದ್ಯವನ್ನು ಭಾರತ ತಂಡ 12 ರನ್ಗಳಿಂದ ಕಳೆದುಕೊಂಡಿದೆ. ಆದರೆ 2-1ರಲ್ಲಿ ಸರಣಿ ಗೆಲ್ಲುವ ಮೂಲಕ ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಸರಣಿಯ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಎಡಗೈ ವೇಗಿ ತಂಗವೇಲು ನಟರಾಜನ್ ಬಗ್ಗೆ ಕೊಹ್ಲಿ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
"ನಟರಾಜನ್ ತುಂಬಾ ಕಠಿಣ ಶ್ರಮ ವಹಿಸುವ ಹುಡುಗ ಹಾಗೂ ತುಂಬಾ ವಿನಮ್ರ ಕೂಡ. ಆತ ಏನಾದರೂ ಇದೇ ಪ್ರದರ್ಶನವನ್ನು ಕಾಯ್ದುಕೊಂಡರೆ 2021ರ ಟಿ-20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅದ್ಭುತ ಅಸ್ತ್ರವಾಗಲಿದ್ದಾರೆ" ಎಂದು ಪಂದ್ಯದ ನಂತರ ನಡೆದ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಹೇಳಿದ್ದಾರೆ.
ಇದಕ್ಕೂ ಮೊದಲು ಭಾರತ ತಂಡದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಕೂಡ ಬುಮ್ರಾ ಹಾಗೂ ಭುವನೇಶ್ವರ ಕುಮಾರ್ ಅವರೊಟ್ಟಿಗೆ ಟಿ.ನಟರಾಜನ್ ಅವರಿಗೆ ಅವಕಾಶ ನೀಡಿದರೆ ಮುಂದಿನ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಅತ್ಯಂತ ಬಲಿಷ್ಠವಾಗಿರುತ್ತದೆ. ತಂಡದಲ್ಲಿ ಇತರೆ ಬೌಲರ್‌ಗಳು ದುಬಾರಿಯಾದರೆ ಎಡಗೈ ವೇಗಿ ಕಡಿಮೆ ಎಕಾನಮಿಯನ್ನು ಕಾಯ್ದುಕೊಂಡು ಸಮತೋಲನಕ್ಕೆ ತರಲಿದ್ದಾರೆ ಎಂದು ಅವರು ಹೇಳಿದ್ದರು.
ನಟರಾಜನ್ ಮೊದಲ ಪಂದ್ಯದಲ್ಲಿ 3 ವಿಕೆಟ್, 2ನೇ ಪಂದ್ಯದಲ್ಲಿ 2 ಹಾಗೂ ಕೊನೆ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಒಟ್ಟಾರೆ 3 ಪಂದ್ಯಗಳ ಸರಣಿಯಲ್ಲಿ ಆಸೀಸ್ ನೆಲದಲ್ಲಿ ಬುಮ್ರಾ ಮತ್ತು ಮಾಲಿಂಗಾ ನಂತರ 6 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.